ಬೆಂಗಳೂರು ಕಲ್ಲು ಗಣಿಯಲ್ಲಿ ಭೀಕರ ದುರಂತ: ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ
ಬೆಂಗಳೂರು ದಕ್ಷಿಣ ತಾಲ್ಲೂಕಿನ ಮಾದಪಟ್ಟಣ ಗ್ರಾಮದ ಕಾವೇರಿ ಕ್ರಷರ್ ಕಲ್ಲು ಗಣಿಯಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಏಳು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಬೃಹತ್ ಬಂಡೆಯೊಂದು ಜಾರಿಬಿದ್ದು ಕಾರ್ಮಿಕರ ಮೇಲೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ.
ಮಾಹಿತಿಯ ಪ್ರಕಾರ, ಗಣಿಯ ಮೇಲ್ಭಾಗದಲ್ಲಿದ್ದ ಬೃಹತ್ ಬಂಡೆಯನ್ನು ಸ್ಥಳಾಂತರಿಸುವ ವೇಳೆ ಅದು ನಿಯಂತ್ರಣ ತಪ್ಪಿ ಕೆಳಭಾಗದ ಗಣಿಗಾರಿಕೆ ಪ್ರದೇಶಕ್ಕೆ ಉರುಳಿದೆ. ಆ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬಂಡೆಯಡಿ ಸಿಲುಕಿದ್ದು, ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣವೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಮೃತರು ಬಿಹಾರ, ಮಧ್ಯಪ್ರದೇಶ ಹಾಗೂ ಉತ್ತರ ಕರ್ನಾಟಕದ ಮೂಲದ ಕಾರ್ಮಿಕರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಲ್ಲುಗಣಿ ಮಾಲೀಕರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಈ ದುರ್ಘಟನೆಗೆ ಕರ್ನಾಟಕ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರ ಸುರಕ್ಷತಾ ಕ್ರಮಗಳನ್ನು ಪಾಲಿಸದ ಕಲ್ಲುಗಣಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಸಾಮಾಜಿಕ ಜಾಲತಾಣದ ಮೂಲಕ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.


