ಡಿಜಿಟಲ್ ಇಂಡಿಯಾಗೆ 11 ವರ್ಷ; ದೇಶದ ಅಭಿವೃದ್ಧಿಗೆ ತಂತ್ರಜ್ಞಾನವೇ ಪ್ರಮುಖ ಶಕ್ತಿ: ಮೋದಿ

1 Min Read
1 Min Read

11 ವರ್ಷಗಳ ಡಿಜಿಟಲ್ ಇಂಡಿಯಾ: ಬಡವರು, ವಂಚಿತರ ಸಬಲೀಕರಣಕ್ಕೆ ಹೊಸ ದಿಕ್ಕು ನೀಡಿದ ಯೋಜನೆ – ಪ್ರಧಾನಿ ಮೋದಿ

ಡಿಜಿಟಲ್ ಇಂಡಿಯಾ ಯೋಜನೆ ಆಡಳಿತ ವ್ಯವಸ್ಥೆಗೆ ಹೊಸ ರೂಪ ನೀಡಿದ್ದು, ನಾಗರಿಕರ ಸಬಲೀಕರಣದೊಂದಿಗೆ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ವೇಗ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಡಿಜಿಟಲ್ ಇಂಡಿಯಾ ಯೋಜನೆಗೆ 11 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ, ಈ ಯೋಜನೆ ದೇಶದ ಪ್ರತಿಯೊಂದು ಕ್ಷೇತ್ರಕ್ಕೂ ಸ್ಪರ್ಶಿಸಿ ಜನಜೀವನವನ್ನು ಸುಲಭಗೊಳಿಸಿದೆ ಎಂದು ತಿಳಿಸಿದ್ದಾರೆ.

ಬಡವರು ಮತ್ತು ಸಮಾಜದ ವಂಚಿತ ವರ್ಗಗಳ ಸಬಲೀಕರಣದಲ್ಲಿ ಡಿಜಿಟಲ್ ಇಂಡಿಯಾ ಮಹತ್ವದ ಪಾತ್ರ ವಹಿಸಿದೆ. ಆಪ್ಟಿಕಲ್ ಫೈಬರ್ ಜಾಲದ ವಿಸ್ತರಣೆಯಿಂದ ಹಿಡಿದು ಡಿಜಿಟಲ್ ಪಾವತಿ ವ್ಯವಸ್ಥೆಯ ಬೆಳವಣಿಗೆಯವರೆಗೆ ಈ ಯೋಜನೆಯ ಯಶಸ್ಸು ಜಾಗತಿಕ ಮಟ್ಟದಲ್ಲಿ ಭಾರತದತ್ತ ಗಮನ ಸೆಳೆದಿದೆ ಎಂದು ಅವರು ಹೇಳಿದ್ದಾರೆ.

ಡಿಜಿಟಲ್ ಪಾವತಿ ವ್ಯವಸ್ಥೆ ಹಾಗೂ ನೇರ ಲಾಭ ವರ್ಗಾವಣೆ (DBT) ಮೂಲಕ ಸರ್ಕಾರದ ನೆರವು ಪಾರದರ್ಶಕವಾಗಿ ಫಲಾನುಭವಿಗಳ ಕೈಗೆ ತಲುಪುತ್ತಿದ್ದು, ತಂತ್ರಜ್ಞಾನವು ಜನರ ಬದುಕನ್ನು ಇನ್ನಷ್ಟು ಸುಲಭಗೊಳಿಸುವ ಪ್ರಮುಖ ಸಾಧನವಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಡಿಜಿಟಲ್ ಇಂಡಿಯಾ ಗ್ರಾಮೀಣ ಪ್ರದೇಶಗಳು, ಎರಡನೇ ಮತ್ತು ಮೂರನೇ ಹಂತದ ನಗರಗಳಿಗೂ ನವೋದ್ಯಮದ ಅಲೆಯನ್ನು ತಲುಪಿಸಿದೆ. ದೇಶದ ಮೂಲೆಮೂಲೆಗಳಿಂದ ಯುವ ಉದ್ಯಮಿಗಳು, ಸ್ಟಾರ್ಟ್‌ಅಪ್‌ಗಳು ಹಾಗೂ ನವೋದ್ಯಮಿಗಳು ಜಾಗತಿಕ ಸವಾಲುಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ತೊಡಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಶಿಕ್ಷಣ, ಆರೋಗ್ಯ, ಕೃಷಿ, ವಾಣಿಜ್ಯ ಹಾಗೂ ಸಾರ್ವಜನಿಕ ಸೇವಾ ವಿತರಣಾ ವ್ಯವಸ್ಥೆಯನ್ನು ಡಿಜಿಟಲ್ ಇಂಡಿಯಾ ಮತ್ತಷ್ಟು ಬಲಪಡಿಸಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಕೃತಕ ಬುದ್ಧಿಮತ್ತೆ (AI), ಸೆಮಿಕಂಡಕ್ಟರ್‌, ಕ್ವಾಂಟಂ ಕಂಪ್ಯೂಟಿಂಗ್ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ವೇಗವಾಗಿ ಮುನ್ನಡೆಯುತ್ತಿದೆ. ತಂತ್ರಜ್ಞಾನವು ಮಾನವ ಕಲ್ಯಾಣಕ್ಕೆ ಸೇವೆ ಸಲ್ಲಿಸುವ, ಪ್ರತಿಯೊಬ್ಬ ನಾಗರಿಕನನ್ನು ಸಬಲಗೊಳಿಸುವ ಹಾಗೂ ಸುಸ್ಥಿರ ಅಭಿವೃದ್ಧಿಗೆ ದಾರಿ ಮಾಡಿಕೊಡುವ ಭವಿಷ್ಯ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Share This Article
Leave a Comment