ಭಾರತದ ನಿವ್ವಳ ಬಾಹ್ಯ ಹೊಣೆಗಾರಿಕೆ (Net External Liabilities) 2025-26ನೇ ಹಣಕಾಸು ವರ್ಷದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 52.4 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಇಳಿಕೆಯಾಗಿದ್ದು, ಮಾರ್ಚ್ ಅಂತ್ಯದ ವೇಳೆಗೆ 209.9 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.
ಆರ್‌ಬಿಐ ಪ್ರಕಾರ, ಭಾರತದಲ್ಲಿನ ವಿದೇಶಿ ಹೂಡಿಕೆದಾರರ ಹಣಕಾಸು ಆಸ್ತಿಗಳ ಮೌಲ್ಯ ಕುಸಿದಿರುವುದು ಹಾಗೂ ಭಾರತೀಯ ನಿವಾಸಿಗಳ ವಿದೇಶಿ ಹಣಕಾಸು ಆಸ್ತಿಗಳು ಹೆಚ್ಚಾಗಿರುವುದು ಈ ಇಳಿಕೆಗೆ ಪ್ರಮುಖ ಕಾರಣವಾಗಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ವಿದೇಶಿ ಹೊಣೆಗಾರಿಕೆಗಳು 40.1 ಬಿಲಿಯನ್ ಡಾಲರ್‌ಗಳಷ್ಟು ಕಡಿಮೆಯಾಗಿದ್ದರೆ, ಭಾರತೀಯರ ವಿದೇಶಿ ಹಣಕಾಸು ಆಸ್ತಿಗಳು 12.3 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿವೆ. ವಿನಿಮಯ ದರದಲ್ಲಾದ ಬದಲಾವಣೆಗಳೂ ಈ ಇಳಿಕೆಗೆ ಸಹಕಾರಿಯಾಗಿವೆ.
ವಿದೇಶಿ ಪೋರ್ಟ್‌ಫೋಲಿಯೊ ಹೂಡಿಕೆ ಹಾಗೂ ನೇರ ವಿದೇಶಿ ಹೂಡಿಕೆ (FDI) ಮೌಲ್ಯದಲ್ಲಿ ಕುಸಿತ ಕಂಡುಬಂದಿರುವುದರಿಂದ ಒಟ್ಟು ವಿದೇಶಿ ಹೊಣೆಗಾರಿಕೆ ಇಳಿಕೆಯಾಗಿದೆ. ರೂಪಾಯಿ ಮೌಲ್ಯ ಪ್ರಮುಖ ವಿದೇಶಿ ಕರೆನ್ಸಿಗಳ ಎದುರು ಕುಸಿದ ಪರಿಣಾಮ, ಡಾಲರ್ ಲೆಕ್ಕದಲ್ಲಿ ಹೂಡಿಕೆಗಳ ಮೌಲ್ಯ ಕಡಿಮೆಯಾಗಿದೆ.
ಇನ್ನೊಂದೆಡೆ, ಭಾರತೀಯರ ವಿದೇಶಿ ನೇರ ಹೂಡಿಕೆ (Overseas Direct Investment) ಮತ್ತು ವಿದೇಶಿ ವಿನಿಮಯ ಮೀಸಲು ನಿಧಿಯ ಹೆಚ್ಚಳದಿಂದ ದೇಶದ ಅಂತರರಾಷ್ಟ್ರೀಯ ಹಣಕಾಸು ಆಸ್ತಿಗಳ ಮೌಲ್ಯ ಏರಿಕೆಯಾಗಿದೆ.
ಮಾರ್ಚ್ ಅಂತ್ಯದ ವೇಳೆಗೆ ಭಾರತದ ಅಂತರರಾಷ್ಟ್ರೀಯ ಹಣಕಾಸು ಆಸ್ತಿಗಳ ಮೌಲ್ಯ 1,210.4 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ವಿದೇಶಿ ಹೊಣೆಗಾರಿಕೆಗಳು 1,420.3 ಬಿಲಿಯನ್ ಡಾಲರ್‌ಗೆ ಇಳಿದಿವೆ. ಇದರೊಂದಿಗೆ ಆಸ್ತಿ-ಹೊಣೆಗಾರಿಕೆ ಅನುಪಾತವು 82 ಶೇಕಡೆಯಿಂದ 85.2 ಶೇಕಡಕ್ಕೆ ಸುಧಾರಿಸಿದೆ.
2025-26ನೇ ಸಂಪೂರ್ಣ ಹಣಕಾಸು ವರ್ಷದಲ್ಲಿ ವಿದೇಶೀಯರ ಭಾರತ ಮೇಲಿನ ನಿವ್ವಳ ಹಣಕಾಸು ಹಕ್ಕು 119.2 ಬಿಲಿಯನ್ ಡಾಲರ್‌ಗಳಷ್ಟು ಇಳಿಕೆಯಾಗಿದ್ದು, ದೇಶದ ಬಾಹ್ಯ ಹಣಕಾಸು ಸ್ಥಿತಿ ಮತ್ತಷ್ಟು ಬಲಗೊಂಡಿದೆ ಎಂದು ಆರ್‌ಬಿಐ ತಿಳಿಸಿದೆ.


