ನವದೆಹಲಿ: ಉತ್ತಮ ಆಡಳಿತದ ಅತ್ಯಂತ ಅಮೂಲ್ಯ ಸಂಪತ್ತು ಜನರ ವಿಶ್ವಾಸವಾಗಿದ್ದು, ಕಳೆದ 12 ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡ ವಿವಿಧ ಕ್ರಮಗಳು ಆಡಳಿತ ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಬರೆದ ಲೇಖನವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ದೇಶದಲ್ಲಿ ನಡೆದ ಪರಿವರ್ತನೆಗಳು ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ನೆರವಾಗಿವೆ ಎಂದು ತಿಳಿಸಿದ್ದಾರೆ.
ಜನಕಲ್ಯಾಣ ಯೋಜನೆಗಳ ಪರಿಣಾಮವಾಗಿ ಕೋಟ್ಯಂತರ ನಾಗರಿಕರ ಜೀವನ ಹೆಚ್ಚು ಸುಲಭ, ಸುರಕ್ಷಿತ ಮತ್ತು ಗೌರವಯುತವಾಗುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಆಡಳಿತ ಮತ್ತು ಸೇವಾ ವಿತರಣೆಯಲ್ಲಿ ಪಾರದರ್ಶಕತೆ ಹಾಗೂ ಪರಿಣಾಮಕಾರಿತ್ವ ಹೆಚ್ಚಿದ ಪರಿಣಾಮ ಜನರ ವಿಶ್ವಾಸ ಮತ್ತಷ್ಟು ವೃದ್ಧಿಯಾಗಿದೆ ಎಂದೂ ಅವರು ಹೇಳಿದ್ದಾರೆ.
ಪಿಯೂಷ್ ಗೋಯಲ್ ಅವರ ಲೇಖನದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 12 ವರ್ಷಗಳ ಆಡಳಿತಾವಧಿಯಲ್ಲಿ ಉತ್ತಮ ಆಡಳಿತ, ಜನಕಲ್ಯಾಣ ಕಾರ್ಯಕ್ರಮಗಳು ಹಾಗೂ ಬಡವರ ಜೀವನದಲ್ಲಿ ಸಂಭವಿಸಿದ ಸಕಾರಾತ್ಮಕ ಬದಲಾವಣೆಗಳ ಕುರಿತು ವಿವರಿಸಲಾಗಿದೆ.
ದೇಶದ ಅಭಿವೃದ್ಧಿ ಪಯಣದಲ್ಲಿ ಜನರ ವಿಶ್ವಾಸವೇ ಸರ್ಕಾರಕ್ಕೆ ಅತಿದೊಡ್ಡ ಬಲವಾಗಿದ್ದು, ಇದೇ ಉತ್ತಮ ಆಡಳಿತದ ನಿಜವಾದ ಮಾನದಂಡವಾಗಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ.


