126 ಎಸೆತಗಳಲ್ಲಿ ತ್ರಿಶತಕ! ಬಿಹಾರದ ಅಕ್ಷರಾ ಗುಪ್ತಾ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ

1 Min Read
1 Min Read

ಭಾಗಲ್ಪುರ್: ಬಿಹಾರ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿರುವ ಮಹಿಳೆಯರ ಅಂಡರ್-19 ಏಕದಿನ ಟೂರ್ನಿಯಲ್ಲಿ ಯುವ ಬ್ಯಾಟರ್ ಅಕ್ಷರಾ ಗುಪ್ತಾ ಭರ್ಜರಿ ಪ್ರದರ್ಶನ ನೀಡಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಕೇವಲ 126 ಎಸೆತಗಳಲ್ಲಿ ಅಜೇಯ 306 ರನ್ ಸಿಡಿಸುವ ಮೂಲಕ ಅವರು ಮಹಿಳಾ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

19 ವರ್ಷದ ಅಕ್ಷರಾ ತಮ್ಮ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 55 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿದರು. ಆರಂಭದಿಂದಲೇ ಎದುರಾಳಿ ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸಿದ ಅವರು, ತಂಡದ ಮೊತ್ತವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು.

ಅಕ್ಷರಾ ಅವರ ಅಸಾಧಾರಣ ಬ್ಯಾಟಿಂಗ್ ನೆರವಿನಿಂದ ತಂಡವು ನಿಗದಿತ 40 ಓವರ್‌ಗಳಲ್ಲಿ 450 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಗುರಿ ಬೆನ್ನತ್ತಿದ ಎದುರಾಳಿ ತಂಡವು ಅಕ್ಷರಾ ಅವರ ತಂಡದ ಬೌಲರ್‌ಗಳ ದಾಳಿಗೆ ತತ್ತರಿಸಿ ಕೇವಲ 121 ರನ್‌ಗಳಿಗೆ ಆಲೌಟ್ ಆಯಿತು.

ದೇಶೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅಕ್ಷರಾ ಅವರ ಈ ತ್ರಿಶತಕ ಅತ್ಯಂತ ದೊಡ್ಡ ವೈಯಕ್ತಿಕ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದ್ದು, ಮುಂಬೈನ ಐರಾ ಗುಪ್ತಾ ದಾಖಲೆಯ ನಂತರದ ಪ್ರಮುಖ ಸಾಧನೆ ಎಂದು ಪರಿಗಣಿಸಲಾಗಿದೆ.

ಕ್ರಿಕೆಟ್ ವಲಯದಲ್ಲಿ ಅಕ್ಷರಾ ಅವರ ಈ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಭವಿಷ್ಯದ ಭಾರತೀಯ ಮಹಿಳಾ ತಂಡದ ಭರವಸೆಯ ಆಟಗಾರ್ತಿಯಾಗಿ ಅವರು ಗುರುತಿಸಿಕೊಳ್ಳುತ್ತಿದ್ದಾರೆ.

Share This Article