ನವದೆಹಲಿ: ಜೂನ್ 21ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಆಯುಷ್ ಸಚಿವಾಲಯದ ಯೋಗ ಸಂಗಮ್ (Yoga Sangam) ಕಾರ್ಯಕ್ರಮಕ್ಕೆ ದೇಶಾದ್ಯಂತ ಭಾರೀ ಸ್ಪಂದನೆ ವ್ಯಕ್ತವಾಗಿದೆ. ಇದುವರೆಗೆ 1.7 ಲಕ್ಷಕ್ಕೂ ಹೆಚ್ಚು ಸಂಘಟಕರು ತಮ್ಮ ಕಾರ್ಯಕ್ರಮಗಳನ್ನು ಯೋಗ ಸಂಗಮ್ ಪೋರ್ಟಲ್‌ನಲ್ಲಿ ನೋಂದಾಯಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಶೈಕ್ಷಣಿಕ ಸಂಸ್ಥೆಗಳು, ವಿವಿಧ ಸಂಘಟನೆಗಳು ಹಾಗೂ ಸಮುದಾಯಗಳು ಯೋಗದ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಈ ನೋಂದಣಿಗಳ ಮೂಲಕ ಸ್ಪಷ್ಟವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಆಯುಷ್ ಸಚಿವ ಪ್ರತಾಪರಾವ್ ಜಾಧವ್, “ಯೋಗ ಸಂಗಮ್ ಆರೋಗ್ಯದ ಮೂಲಕ ಏಕತೆಯನ್ನು ಸಾರುವ ಮಹತ್ವದ ಅಭಿಯಾನವಾಗಿದೆ” ಎಂದು ಹೇಳಿದ್ದಾರೆ. ದೇಶದ ಸಾವಿರಾರು ಸ್ಥಳಗಳಲ್ಲಿ ಒಂದೇ ಸಮಯದಲ್ಲಿ ಸಾಮಾನ್ಯ ಯೋಗ ಪ್ರೋಟೋಕಾಲ್ (Common Yoga Protocol) ಅನುಸರಿಸಿ ಯೋಗಾಭ್ಯಾಸ ನಡೆಸುವುದರಿಂದ ರಾಷ್ಟ್ರೀಯ ಏಕತೆ ಬಲಗೊಳ್ಳುವುದರ ಜೊತೆಗೆ ಆರೋಗ್ಯಕರ ಜೀವನಶೈಲಿಗೂ ಉತ್ತೇಜನ ಸಿಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಯೋಗದ ಪ್ರಯೋಜನಗಳು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ಜಾಧವ್ ಹೇಳಿದರು. ಯೋಗ ಸಂಗಮ್ ಕಾರ್ಯಕ್ರಮದಡಿ ಪಾಲುದಾರ ಸಂಸ್ಥೆಗಳು ಸ್ವತಂತ್ರವಾಗಿ ಯೋಗ ಶಿಬಿರಗಳನ್ನು ಆಯೋಜಿಸುತ್ತಿದ್ದು, ಸಾಮಾನ್ಯ ಯೋಗ ಪ್ರೋಟೋಕಾಲ್ ಅನುಸರಿಸುವ ಮೂಲಕ ದೇಶವ್ಯಾಪಿ ಸಮನ್ವಯ ಸಾಧಿಸಲಾಗುತ್ತಿದೆ.
ಯೋಗವನ್ನು ಜನಸಾಮಾನ್ಯರ ದೈನಂದಿನ ಬದುಕಿನ ಭಾಗವಾಗಿಸುವ ಹಾಗೂ ಆರೋಗ್ಯ ಮತ್ತು ಕ್ಷೇಮದ ಸುಲಭ ಸಾಧನವಾಗಿ ಮತ್ತಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಸಚಿವಾಲಯ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.


