ಎವಿಯನ್ (ಫ್ರಾನ್ಸ್): ಜಿ7 ಶೃಂಗಸಭೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜರ್ಮನಿಯ ಚಾನ್ಸಲರ್ ಫ್ರಿಡ್ರಿಕ್ ಮೆರ್ಝ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಭಯ ನಾಯಕರು ಭಾರತ-ಜರ್ಮನಿ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಸಮಗ್ರ ಚರ್ಚೆ ನಡೆಸಿದರು.
ಸಭೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, ಜರ್ಮನ್ ಚಾನ್ಸಲರ್ ಜೊತೆಗಿನ ಮಾತುಕತೆ ಅತ್ಯಂತ ಫಲಪ್ರದವಾಗಿತ್ತು ಎಂದು ತಿಳಿಸಿದ್ದಾರೆ. ವ್ಯಾಪಾರ, ಹೂಡಿಕೆ, ವಲಯ ಆರ್ಥಿಕತೆ (Circular Economy), ರಕ್ಷಣಾ ಕ್ಷೇತ್ರ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸಹಭಾಗಿತ್ವವನ್ನು ವಿಸ್ತರಿಸುವ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ಅವರು ಹೇಳಿದರು.
ಇದರ ಜೊತೆಗೆ, ಭಾರತ ಮತ್ತು ಜರ್ಮನಿ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಮಾರ್ಗಗಳ ಬಗ್ಗೆಯೂ ಅಭಿಪ್ರಾಯ ವಿನಿಮಯ ನಡೆದಿದೆ. ಜಾಗತಿಕ ಸವಾಲುಗಳ ನಡುವೆಯೂ ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳು ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ, ವಿವಿಧ ರಾಷ್ಟ್ರಗಳ ನಾಯಕರೊಂದಿಗೆ ಸರಣಿ ದ್ವಿಪಕ್ಷೀಯ ಸಭೆಗಳನ್ನು ನಡೆಸುತ್ತಿದ್ದು, ಭಾರತದ ಜಾಗತಿಕ ರಾಜತಾಂತ್ರಿಕ ಪ್ರಭಾವವನ್ನು ಮತ್ತಷ್ಟು ಬಲಪಡಿಸುವತ್ತ ಗಮನ ಹರಿಸಿದ್ದಾರೆ.


