ಹಾಲ್ಯಾಂಡ್ ಹವಾ! ಇರಾಕ್ ವಿರುದ್ಧ ನಾರ್ವೆಗೆ 4-1 ಭರ್ಜರಿ ಜಯ

1 Min Read
1 Min Read

ಫಿಫಾ ವಿಶ್ವಕಪ್ 2026 ಟೂರ್ನಿಯಲ್ಲಿ ನಾರ್ವೆ ಹಾಗೂ ಫ್ರಾನ್ಸ್ ತಂಡಗಳು ಭರ್ಜರಿ ಗೆಲುವು ದಾಖಲಿಸಿ ಅಭಿಯಾನವನ್ನು ಶುಭಾರಂಭ ಮಾಡಿವೆ. ಅಮೆರಿಕದ ಬೋಸ್ಟನ್ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್ ‘ಐ’ ಪಂದ್ಯದಲ್ಲಿ ನಾರ್ವೆ, ಇರಾಕ್ ವಿರುದ್ಧ 4-1 ಗೋಲುಗಳ ಅಂತರದ ಸುಲಭ ಜಯ ಸಾಧಿಸಿತು.

ನಾರ್ವೆಯ ಸ್ಟಾರ್ ಸ್ಟ್ರೈಕರ್ ಎರ್ಲಿಂಗ್ ಹಾಲ್ಯಾಂಡ್ ವಿಶ್ವಕಪ್ ಪದಾರ್ಪಣಿಯನ್ನು ಸ್ಮರಣೀಯವಾಗಿಸಿಕೊಂಡು ಎರಡು ಗೋಲುಗಳನ್ನು ಬಾರಿಸಿದರು. ಈ ಗೆಲುವಿನೊಂದಿಗೆ ನಾರ್ವೆ ಗ್ರೂಪ್ ‘ಐ’ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇದಕ್ಕೂ ಮೊದಲು ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಫ್ರಾನ್ಸ್, ಸೆನೆಗಲ್ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಫ್ರಾನ್ಸ್‌ನ ನಾಯಕ ಕಿಲಿಯನ್ ಎಂಬಾಪ್ಪೆ ಎರಡು ಗೋಲುಗಳನ್ನು ಬಾರಿಸಿ ತಂಡದ ಗೆಲುವಿನ ರೂವಾರಿಯಾದರು.

ಈ ಎರಡು ಗೋಲುಗಳೊಂದಿಗೆ ಎಂಬಾಪ್ಪೆ ಫ್ರಾನ್ಸ್ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದು, ಒಟ್ಟು 58 ಗೋಲುಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಅಲ್ಲದೇ ವಿಶ್ವಕಪ್ ಇತಿಹಾಸದ ಗೋಲು ದಾಖಲೆ ಪಟ್ಟಿಯಲ್ಲಿ ಅರ್ಜೆಂಟೀನಾದ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರನ್ನು ಹಿಂದಿಕ್ಕಿದ್ದಾರೆ.

ಪಂದ್ಯದ ಮೊದಲಾರ್ಧದಲ್ಲಿ ಸೆನೆಗಲ್ ತೀವ್ರ ಪೈಪೋಟಿ ನೀಡಿದರೂ, 61ನೇ ನಿಮಿಷದಲ್ಲಿ ಎಂಬಾಪ್ಪೆ ಗೋಲು ದಾಖಲಿಸುವ ಮೂಲಕ ಫ್ರಾನ್ಸ್‌ಗೆ ಮುನ್ನಡೆ ತಂದುಕೊಟ್ಟರು. ನಂತರ ಬ್ರಾಡ್ಲಿ ಬಾರ್ಕೊಲಾ 79ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ಅಂತರವನ್ನು ಹೆಚ್ಚಿಸಿದರು. ಕೊನೆಯಲ್ಲಿ ಸೆನೆಗಲ್ ಪರ ಇಬ್ರಾಹಿಂ ಮ್ಬಾಯೆ ಒಂದು ಗೋಲು ದಾಖಲಿಸಿದರೂ ಸೋಲು ತಪ್ಪಿಸಲಿಲ್ಲ.

ವಿಶ್ವಕಪ್‌ನಲ್ಲಿ ಈಗಾಗಲೇ 14 ಗೋಲುಗಳನ್ನು ದಾಖಲಿಸಿರುವ ಎಂಬಾಪ್ಪೆ, ಜರ್ಮನಿಯ ದಂತಕಥೆ ಮಿರೋಸ್ಲಾವ್ ಕ್ಲೋಸೆ ಅವರ 16 ಗೋಲುಗಳ ದಾಖಲೆಯತ್ತ ಹೆಜ್ಜೆ ಇಟ್ಟಿದ್ದಾರೆ.

ಇನ್ನಿತರ ಪಂದ್ಯಗಳಲ್ಲಿ ಇರಾನ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ 2-2 ಗೋಲುಗಳ ಸಮಬಲದಲ್ಲಿ ಅಂತ್ಯಗೊಂಡರೆ, ಉರುಗ್ವೆ ಹಾಗೂ ಸೌದಿ ಅರೇಬಿಯಾ 1-1 ಗೋಲುಗಳ ಡ್ರಾ ಸಾಧಿಸಿದವು. ಬೆಲ್ಜಿಯಂ ಮತ್ತು ಈಜಿಪ್ಟ್ ನಡುವಿನ ಗ್ರೂಪ್ ‘ಜಿ’ ಪಂದ್ಯವೂ 1-1 ಗೋಲುಗಳ ಸಮಬಲದಲ್ಲಿ ಮುಕ್ತಾಯವಾಯಿತು.

Share This Article