ಆಕ್ಲೆಂಡ್: ಎಫ್‌ಐಎಚ್ ಮಹಿಳಾ ಹಾಕಿ ನೇಷನ್ಸ್ ಕಪ್ ನ್ಯೂಜಿಲೆಂಡ್ 2026 ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಮತ್ತೊಮ್ಮೆ ತನ್ನ ಸಾಮರ್ಥ್ಯ ಪ್ರದರ್ಶಿಸಿ ಸೆಮಿಫೈನಲ್‌ಗೆ ಭರ್ಜರಿ ಪ್ರವೇಶ ಪಡೆದಿದೆ. ಪೂಲ್ ‘ಎ’ ವಿಭಾಗದ ಎರಡನೇ ಪಂದ್ಯದಲ್ಲಿ ಜಪಾನ್ ವಿರುದ್ಧ 2-1 ಗೋಲುಗಳ ಅಂತರದ ಗೆಲುವು ಸಾಧಿಸಿದ ಭಾರತ, ಸತತ ಎರಡನೇ ಜಯದೊಂದಿಗೆ ಅಜೇಯವಾಗಿ ಮುನ್ನಡೆದಿದೆ.
ನ್ಯೂಜಿಲೆಂಡ್‌ನ ಆಕ್ಲೆಂಡ್‌ನ ನಾರ್ತ್ ಹಾರ್ಬರ್ ನ್ಯಾಷನಲ್ ಹಾಕಿ ಸೆಂಟರ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಸಲೀಮಾ ಟೆಟೆ ಹಾಗೂ ಲಾಲ್ರೆಂಸಿಯಾಮಿ ತಲಾ ಒಂದು ಗೋಲು ದಾಖಲಿಸಿ ಗೆಲುವಿನ ರೂವಾರಿಗಳಾದರು. ಜಪಾನ್ ಪರ ಹಿರಾಮಿಟ್ಸು ಐ ಏಕೈಕ ಗೋಲು ಬಾರಿಸಿದರು.
ಈ ಪಂದ್ಯ ಭಾರತೀಯ ಮಿಡ್‌ಫೀಲ್ಡರ್ ಜ್ಯೋತಿ ಅವರಿಗೆ ವಿಶೇಷವಾಗಿದ್ದು, ಅವರು ತಮ್ಮ 100ನೇ ಹಿರಿಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ ಮೈಲುಗಲ್ಲು ಸಾಧಿಸಿದರು.
ಅಮೆರಿಕ ಮತ್ತು ಜಪಾನ್ ವಿರುದ್ಧದ ಗೆಲುವಿನಿಂದ ಭಾರತ ಆರು ಅಂಕಗಳೊಂದಿಗೆ ಪೂಲ್ ‘ಎ’ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದರೊಂದಿಗೆ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ.
ಭಾರತ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನಾಳೆ ಬೆಳಗ್ಗೆ 4:15ಕ್ಕೆ ಉರುಗ್ವೆ ತಂಡವನ್ನು ಎದುರಿಸಲಿದೆ. ಇನ್ನೊಂದೆಡೆ, ಜಪಾನ್ ಮತ್ತು ಅಮೆರಿಕ ತಂಡಗಳು ಪೂಲ್ ‘ಎ’ಯಿಂದ ಉಳಿದಿರುವ ಮತ್ತೊಂದು ಸೆಮಿಫೈನಲ್ ಸ್ಥಾನಕ್ಕಾಗಿ ಸೆಣಸಲಿವೆ.
ಭಾರತೀಯ ತಂಡದ ಸಂಘಟಿತ ಆಟ, ಆಕ್ರಮಣಕಾರಿ ಮನೋಭಾವ ಮತ್ತು ದೃಢ ರಕ್ಷಣಾ ಪ್ರದರ್ಶನ ಪ್ರಶಸ್ತಿ ಕನಸಿಗೆ ಮತ್ತಷ್ಟು ಬಲ ತುಂಬಿದೆ.


