ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅಗಲಿಕೆ: ಶತಮಾನ ದಾಟಿದ ಸ್ಫೂರ್ತಿದಾಯಕ ಜೀವನಕ್ಕೆ ಪೂರ್ಣವಿರಾಮ

1 Min Read
1 Min Read

ಬೆಂಗಳೂರು, ನ.14:
ಪರಿಸರ ಸಂರಕ್ಷಣೆಗೆ ಜೀವನವನ್ನೇ ಅರ್ಪಿಸಿ “ವೃಕ್ಷಮಾತೆ” ಎಂದೇ ಖ್ಯಾತಿಯಾಗಿದ್ದ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಇಂದು ಅಪ್ಪತ್ತ 114ನೇ ವಯಸ್ಸಿನಲ್ಲಿ ವಿಧಿವಶರಾದರು. ಕೆಲ ದಿನಗಳಿಂದ ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ತಿಮ್ಮಕ್ಕ ಅವರು, ಬೆಂಗಳೂರಿನ ಜಯನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

1911ರ ಜೂನ್ 30ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದ್ದ ತಿಮ್ಮಕ್ಕ, ವಿವಾಹದ ನಂತರ ಮಕ್ಕಳಿಲ್ಲದ ನೋವನ್ನು ಮರೆಯಲು ಮಗುವಿನಂತೆಯೇ ಆಲದ ಮರಗಳನ್ನು ನೆಟ್ಟು ಬೆಳೆಸಿದ ಕಥೆ ಈಗ ಪೀಳಿಗೆಗಳಿಗೆ ಸ್ಫೂರ್ತಿಯಾಗಿದೆ. ಮಾಗಡಿ ತಾಲೂಕಿನ ಚಿಕ್ಕಯ್ಯ ಅವರೊಂದಿಗೆ ಜೀವನ ಕಟ್ಟಿಕೊಂಡ ಅವರು, ಜೀವನವೇ ಮರಗಳ ಸೇವೆಯಾಗಿ ಪರಿವರ್ತಿತವಾಯಿತು.

ಅನಕ್ಷರಸ್ಥರಾಗಿದ್ದರೂ, ಪರಿಸರ ಸಂರಕ್ಷಣೆಯಲ್ಲಿ ತೋರಿದ ಸಮರ್ಪಣೆ ಅಪಾರ. ಆಲದ ಮರಗಳನ್ನು ನೆಟ್ಟು ಬೆಳೆಸಿದ ಪ್ರಯತ್ನದಿಂದಲೇ ದೇಶ-ವಿದೇಶಗಳಿಂದ ಗೌರವ ಗಳಿಸಿದ ಅವರು,

  • ರಾಜ್ಯೋತ್ಸವ ಪ್ರಶಸ್ತಿ

  • ನಾಡೋಜ ಪ್ರಶಸ್ತಿ

  • ಆರ್ಟ್ ಆಫ್ ಲಿವಿಂಗ್ – ವಿಶಾಲಾಕ್ಷಿ ಪ್ರಶಸ್ತಿ

  • ಪದ್ಮಶ್ರೀ (2019)

  • ರಾಷ್ಟ್ರೀಯ ಪೌರ ಪ್ರಶಸ್ತಿ (1995)

  • ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ (1997)
    ಹಾಗೂ ಅನೇಕ ಸನ್ಮಾನಗಳನ್ನು ಪಡೆದಿದ್ದರು.

2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸಮ್ಮಾನಿಸಿತು.

ಜೀವನಪೂರ್ತಿ ಮರ, ಗಿಡಗಳನ್ನು ತಮ್ಮ ಮಕ್ಕಳಂತೆ ಸಾಕಿದ ತಿಮ್ಮಕ್ಕ ಅವರ ಅಗಲಿಕೆಯಿಂದ ಪರಿಸರ ಹೋರಾಟಗಾರರು, ಸಾಮಾಜಿಕ ಸಂಘಟನೆಗಳು ಮತ್ತು ದೇಶದ ಪರಿಸರ ಪ್ರೇಮಿಗಳು ಆಳವಾದ ಶೋಕ ವ್ಯಕ್ತಪಡಿಸಿದ್ದಾರೆ.

ತಿಮ್ಮಕ್ಕ ಅವರ ಪರಿಸರ ಪ್ರೇಮ, ಹೋರಾಟ ಮತ್ತು ಮೌಲ್ಯಗಳು ಮುಂದಿನ ಪೀಳಿಗೆಗಳಿಗೆ ದೀಪಸ್ತಂಭವಾಗಿಯೇ ಉಳಿಯಲಿವೆ.

Share This Article
Leave a Comment