ನವದೆಹಲಿ: ಇನ್‌ಸ್ಟಾಗ್ರಾಂನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ (Child Sexual Exploitative and Abuse Material – CSEAM) ಸಂಬಂಧಿಸಿದ ಪಾವತಿಸಿದ ಜಾಹೀರಾತುಗಳು (Paid Ads) ಪ್ರಸಾರವಾಗುತ್ತಿರುವ ಕುರಿತು ಕೇಂದ್ರ ಸರ್ಕಾರ ಮೆಟಾ (Meta) ಸಂಸ್ಥೆಗೆ ಕಠಿಣ ನೋಟಿಸ್ ಜಾರಿಗೊಳಿಸಿದೆ.
ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಇನ್‌ಸ್ಟಾಗ್ರಾಂನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಎಲ್ಲಾ ಜಾಹೀರಾತುಗಳು ಹಾಗೂ ಅಂತಹ ವಿಷಯಗಳಿಗೆ ಪ್ರವೇಶ ಕಲ್ಪಿಸುವ ಅಥವಾ ಅವುಗಳನ್ನು ಉತ್ತೇಜಿಸುವ ಎಲ್ಲ ರೀತಿಯ ವಿಷಯಗಳನ್ನು ತಕ್ಷಣವೇ ತೆಗೆದುಹಾಕುವಂತೆ ಮೆಟಾಗೆ ನಿರ್ದೇಶನ ನೀಡಿದೆ.
ಇದರ ಜೊತೆಗೆ, ಭಾರತದ ಮಧ್ಯವರ್ತಿ (Intermediary) ಸುರಕ್ಷತಾ ಮಾರ್ಗಸೂಚಿಗಳನ್ನು ಮೆಟಾ ಸಮರ್ಪಕವಾಗಿ ಪಾಲಿಸಿರುವುದೇ ಎಂಬುದರ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಈ ಸಂಬಂಧ ಏಳು ದಿನಗಳೊಳಗೆ ಸಮಗ್ರ ವಿವರಣೆ ಸಲ್ಲಿಸುವಂತೆ ಮೆಟಾಗೆ ಸೂಚಿಸಲಾಗಿದೆ.
ಭಾರತದ ಡಿಜಿಟಲ್ ಕಾನೂನುಗಳ ಪ್ರಕಾರ ಅಶ್ಲೀಲತೆ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯಗಳ ಪ್ರಸಾರ, ಪ್ರಚಾರ ಅಥವಾ ವಿತರಣೆ ಗಂಭೀರ ಅಪರಾಧವಾಗಿದೆ.
ಈ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಉತ್ತೇಜಿಸುವ ಆಕ್ಷೇಪಾರ್ಹ ವಿಷಯಗಳು ಕಾಣಿಸಿಕೊಂಡಿರುವ ಕುರಿತು ವರದಿಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮೆಟಾದಿಂದ ಸ್ಪಷ್ಟನೆ ಕೋರಿತ್ತು. ಇದೀಗ ಆ ಕ್ರಮದ ಭಾಗವಾಗಿ ಅಧಿಕೃತ ನೋಟಿಸ್ ಜಾರಿಗೊಳಿಸಲಾಗಿದೆ.


