VB-G RAM G ಕಾಯ್ದೆಯಡಿ ಹೊಸ ಕೂಲಿ ದರ ಜಾರಿ; ದಿನಕ್ಕೆ ಕನಿಷ್ಠ ₹300 ಖಾತರಿ
ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) [VB-G RAM G] ಕಾಯ್ದೆ, 2025 ಅಡಿಯಲ್ಲಿ ಪರಿಷ್ಕೃತ ಕೂಲಿ ದರಗಳನ್ನು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇವು ಇಂದಿನಿಂದಲೇ ಜಾರಿಗೆ ಬಂದಿವೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೂಲಿ ದರವನ್ನು ಹೆಚ್ಚಿಸಲಾಗಿದೆ. ಮೊದಲ ಬಾರಿಗೆ ದಿನಕ್ಕೆ ಕನಿಷ್ಠ ₹300 ಮಧ್ಯಂತರ ಮೂಲ ಕೂಲಿ ದರ ನಿಗದಿಪಡಿಸಲಾಗಿದ್ದು, ಯೋಜನೆಯಡಿ ಯಾವುದೇ ರಾಜ್ಯದಲ್ಲೂ ಕೂಲಿ ದರ ₹300ಕ್ಕಿಂತ ಕಡಿಮೆಯಾಗದಂತೆ ಖಚಿತಪಡಿಸಲಾಗಿದೆ.
ಈ ಹಿಂದೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಅಡಿಯಲ್ಲಿ ರಾಷ್ಟ್ರೀಯ ಸರಾಸರಿ ಕೂಲಿ ₹298.80 ಇದ್ದರೆ, ಇದೀಗ VB-G RAM G ಯೋಜನೆಯಡಿ ಅದು ₹327.40ಕ್ಕೆ ಏರಿಕೆಯಾಗಿದೆ. ಇದು ಸರಾಸರಿ 10 ಶೇಕಡಕ್ಕೂ ಅಧಿಕ ಹೆಚ್ಚಳವಾಗಿದೆ.
ಈ ಮೊದಲು ₹300ಕ್ಕಿಂತ ಕಡಿಮೆ ಕೂಲಿ ಹೊಂದಿದ್ದ 21 ರಾಜ್ಯಗಳು ಮತ್ತು ಆಡಳಿತ ಘಟಕಗಳ ಕೂಲಿ ದರವನ್ನು ಹೊಸ ಮಾನದಂಡಕ್ಕೆ ಏರಿಸಲಾಗಿದೆ.
ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಅಸ್ಸಾಂ, ಅರುಣಾಚಲ ಪ್ರದೇಶ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಕೂಲಿ ದರ 15ರಿಂದ 25 ಶೇಕಡಾವರೆಗೆ ಹೆಚ್ಚಳವಾಗಿದೆ. ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ನಲ್ಲಿ ಸುಮಾರು 24.5 ಶೇಕಡಾ ಹೆಚ್ಚಳ ದಾಖಲಾಗಿದ್ದು, ಇದು ದೇಶದಲ್ಲೇ ಅತಿ ಹೆಚ್ಚು ಎಂದು ಸಚಿವಾಲಯ ತಿಳಿಸಿದೆ.
ಈಗ ಹರಿಯಾಣದಲ್ಲಿ ದಿನಗೂಲಿ ₹409, ಗೋವಾದಲ್ಲಿ ₹406, ಕೇರಳದಲ್ಲಿ ₹401 ನಿಗದಿಯಾಗಿದೆ. ಸಿಕ್ಕಿಂನ ಎತ್ತರದ ಗ್ರಾಮ ಪಂಚಾಯಿತಿಗಳಲ್ಲಿ ದಿನಗೂಲಿ ₹450 ಆಗಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಈ ಕೂಲಿ ದರ ಪರಿಷ್ಕರಣೆಯನ್ನು ಸಮೃದ್ಧ ಗ್ರಾಮಗಳ ಮೂಲಕ ವಿಕಸಿತ ಭಾರತ ನಿರ್ಮಾಣದತ್ತ ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಿದ್ದಾರೆ.


