ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಇಂದು ಮೂರು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಯುನೈಟೆಡ್ ಕಿಂಗ್‌ಡಮ್‌ನ ಲಂಡನ್‌ಗೆ ತೆರಳಿದ್ದಾರೆ. ಭಾರತ–ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (CETA) ಹಾಗೂ ಅದರ ಜೊತೆಗಿನ ಡಬಲ್ ಕಾನ್ಟ್ರಿಬ್ಯೂಷನ್ ಕನ್ವೆನ್ಷನ್ (DCC) ಮುಂದಿನ ತಿಂಗಳ 15ರಂದು ಜಾರಿಗೆ ಬರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.
ಪ್ರವಾಸದ ವೇಳೆ ಸಚಿವರು ಯುಕೆ ವಾಣಿಜ್ಯ ಮತ್ತು ವ್ಯಾಪಾರ ಇಲಾಖೆಯ ರಾಜ್ಯ ಕಾರ್ಯದರ್ಶಿ ಪೀಟರ್ ಕೈಲ್ ಅವರೊಂದಿಗೆ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಚರ್ಚೆಗಳಲ್ಲಿ ವ್ಯಾಪಾರ ಒಪ್ಪಂದ ಜಾರಿಗೆ ಬೇಕಾದ ಸಿದ್ಧತೆಗಳು, ನಿಯಂತ್ರಣ ವ್ಯವಸ್ಥೆಗಳ ಹೊಂದಾಣಿಕೆ, ಕಸ್ಟಮ್ಸ್ ಸುಗಮೀಕರಣ ಹಾಗೂ ಭಾರತೀಯ ರಫ್ತುಗಳಿಗೆ ಮಾರುಕಟ್ಟೆ ಪ್ರವೇಶ ವಿಸ್ತರಣೆ ಕುರಿತ ವಿಷಯಗಳು ಪ್ರಮುಖವಾಗಿವೆ.
DCC ಕುರಿತು ಕಾರ್ಯಾಚರಣಾ ರೂಪರೇಖೆಯನ್ನು ಎರಡೂ ದೇಶಗಳು ಪರಿಶೀಲಿಸಲಿದ್ದು, ವೃತ್ತಿಪರರು ಮತ್ತು ಉದ್ಯಮಿಗಳ ನಡುವಿನ ಚಲನೆ ಸುಗಮಗೊಳಿಸುವ ಉದ್ದೇಶವನ್ನು ಇದು ಹೊಂದಿದೆ. ಸೇವಾ ವಲಯದಲ್ಲಿ ಮಾರುಕಟ್ಟೆ ಪ್ರವೇಶ ಹಾಗೂ ದ್ವಿಪಕ್ಷೀಯ ಹೂಡಿಕೆ ಮತ್ತು ವ್ಯಾಪಾರ ಸಂಬಂಧಗಳನ್ನು ಬಲಪಡಿಸುವ ಕ್ರಮಗಳೂ ಚರ್ಚೆಗೆ ಒಳಪಡಲಿವೆ.
ಲಂಡನ್‌ನಲ್ಲಿ ನಡೆಯುವ ಇಂಡಿಯಾ ಗ್ಲೋಬಲ್ ಫೋರಮ್‌ನ ಉದ್ಘಾಟನಾ ಅಧಿವೇಶನದಲ್ಲೂ ಸಚಿವ ಗೋಯಲ್ ಭಾಗವಹಿಸಲಿದ್ದಾರೆ. “Capital, Innovation and the UK–India Moment” ಎಂಬ ವಿಷಯದ ಮೇಲೆ ಅವರು ಪ್ರಮುಖ ಭಾಷಣ ಮಾಡಲಿದ್ದಾರೆ.
ಅವರು ಹೂಡಿಕೆದಾರರು ಮತ್ತು ಉದ್ಯಮ ನಾಯಕರೊಂದಿಗೆ ಸರಣಿ ಸರ್ಕಾರಿ–ವ್ಯಾಪಾರ ಸಭೆಗಳಲ್ಲಿ ಭಾಗವಹಿಸಲಿದ್ದು, HSBC ಹಾಗೂ Rolls-Royce ಸೇರಿದಂತೆ ಪ್ರಮುಖ ಜಾಗತಿಕ ಕಂಪನಿಗಳ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಜೊತೆಗೆ UK–India Business Council ಆಯೋಜಿಸುವ ವ್ಯವಹಾರ ಸತ್ರದಲ್ಲೂ ಪಾಲ್ಗೊಳ್ಳಲಿದ್ದಾರೆ. ಏಷಿಯಾ ಹೌಸ್‌ನಲ್ಲಿ ನಡೆಯುವ ರೌಂಡ್‌ಟೇಬಲ್ ಚರ್ಚೆಯನ್ನೂ ಅವರು ಮುನ್ನಡೆಸಲಿದ್ದಾರೆ.
2030ರೊಳಗೆ ಭಾರತ–ಯುಕೆ ನಡುವೆ 120 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ಸಾಧಿಸುವ ಗುರಿಯತ್ತ ಈ ಭೇಟಿ ಪ್ರಮುಖ ಹೆಜ್ಜೆಯಾಗಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.


