ನವದೆಹಲಿ: ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (NAFED)ದ ಇ-ಹರಾಜು ಪೋರ್ಟಲ್ಗೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಚಾಲನೆ ನೀಡಲಿದ್ದಾರೆ. ಹರಾಜು ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ, ಪರಿಣಾಮಕಾರಿ ಹಾಗೂ ಸುಗಮಗೊಳಿಸುವ ಉದ್ದೇಶದಿಂದ ಈ ಡಿಜಿಟಲ್ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಹೊಸ ಪೋರ್ಟಲ್ ಮೂಲಕ ಹರಾಜು ಸಂಬಂಧಿತ ಚಟುವಟಿಕೆಗಳನ್ನು ಆನ್ಲೈನ್ ಮೂಲಕ ನಿರ್ವಹಿಸಲು ಸಾಧ್ಯವಾಗಲಿದ್ದು, ರೈತರು, ಸಹಕಾರ ಸಂಸ್ಥೆಗಳು ಹಾಗೂ ಇತರೆ ಹಿತಾಸಕ್ತಿದಾರರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿರೀಕ್ಷೆಯಿದೆ. ನಾಫೆಡ್ ಕಾರ್ಯಾಚರಣೆಯನ್ನು ಆಧುನೀಕರಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಕಾರ್ಯಕ್ರಮದ ಸಂದರ್ಭದಲ್ಲಿ ಅಮಿತ್ ಶಾ ಅವರು ರೈತಕೇಂದ್ರಿತ ಮತ್ತು ತಂತ್ರಜ್ಞಾನ ಆಧಾರಿತ ಹಲವು ಹೊಸ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ. ರೈತರ ಮಕ್ಕಳ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ‘ನಾಫೆಡ್-ಕಲ್ಯಾಣ’ ವಿದ್ಯಾರ್ಥಿವೇತನ ಯೋಜನೆ, ಕಾಳುಗಳು ಮತ್ತು ಎಣ್ಣೆ ಬೀಜಗಳ ದಾಸ್ತಾನು ನಿರ್ವಹಣೆಗೆ ‘ದೃಷ್ಟಿ’ (DRISHTI) ಪೋರ್ಟಲ್ ಹಾಗೂ ಆಡಳಿತಾತ್ಮಕ ಕಾರ್ಯಕ್ಷಮತೆ ಹೆಚ್ಚಿಸಲು ಎಂಟರ್ಪ್ರೈಸ್ ರಿಸೋರ್ಸ್ ಪ್ಲಾನಿಂಗ್ (ERP) ಪೋರ್ಟಲ್ಗಳನ್ನು ಈ ವೇಳೆ ಅನಾವರಣಗೊಳಿಸಲಾಗುತ್ತದೆ.
ಇದರ ಬಳಿಕ ನಾಫೆಡ್ ನಿರ್ದೇಶಕರ ಮಂಡಳಿಯ ಸಭೆಯ ಅಧ್ಯಕ್ಷತೆಯನ್ನು ಅಮಿತ್ ಶಾ ವಹಿಸಲಿದ್ದಾರೆ. ಸಭೆಯಲ್ಲಿ ನಾಫೆಡ್ನ ಕಾರ್ಯಚಟುವಟಿಕೆಗಳು, ಸಾಧನೆಗಳು, ಹಿಂದಿನ ನಿರ್ದೇಶನಗಳ ಅನುಷ್ಠಾನ ಪ್ರಗತಿ ಹಾಗೂ ಮುಂದಿನ ಕಾರ್ಯತಂತ್ರದ ಕುರಿತು ಸಮಗ್ರ ಪ್ರಸ್ತುತಿ ನೀಡಲಾಗುವುದು.
ಕೇಂದ್ರ ಸರ್ಕಾರದ ‘ಸಹಕಾರದಿಂದ ಸಮೃದ್ಧಿ’ (Sahkar Se Samriddhi) ಪರಿಕಲ್ಪನೆಗೆ ಅನುಗುಣವಾಗಿ ಈ ಯೋಜನೆಗಳನ್ನು ರೂಪಿಸಲಾಗಿದ್ದು, ತಂತ್ರಜ್ಞಾನ, ಪಾರದರ್ಶಕತೆ ಹಾಗೂ ರೈತಪರ ಸುಧಾರಣೆಗಳ ಮೂಲಕ ಸಹಕಾರ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿವೆ.
ಸಹಕಾರ ಕ್ಷೇತ್ರದ ಡಿಜಿಟಲೀಕರಣ ಮತ್ತು ರೈತರ ಸಬಲೀಕರಣಕ್ಕೆ ಈ ಉಪಕ್ರಮಗಳು ಹೊಸ ದಿಕ್ಕು ನೀಡಲಿವೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.


