ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಆಯೋಜಿಸುವ ಯುಜಿಸಿ ನೆಟ್ (UGC NET) ಜೂನ್ 2026 ಪರೀಕ್ಷೆ ಇಂದಿನಿಂದ ಆರಂಭವಾಗುತ್ತಿದೆ. ದೇಶದಾದ್ಯಂತ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ ನಡೆಯಲಿರುವ ಈ ಪರೀಕ್ಷೆ ಜೂನ್ 30ರವರೆಗೆ ಎರಡು ಪಾಳಿಗಳಲ್ಲಿ ನಡೆಸಲಾಗುತ್ತದೆ.
ಜೂನಿಯರ್ ರಿಸರ್ಚ್ ಫೆಲೋಶಿಪ್ (JRF), ಸಹಾಯಕ ಪ್ರಾಧ್ಯಾಪಕರ ಅರ್ಹತೆ ಹಾಗೂ ಪಿಎಚ್ಡಿ ಪ್ರವೇಶಕ್ಕಾಗಿ ನಡೆಯುವ ಈ ರಾಷ್ಟ್ರೀಯ ಮಟ್ಟದ ಪರೀಕ್ಷೆಗೆ ಸಾವಿರಾರು ಅಭ್ಯರ್ಥಿಗಳು ಹಾಜರಾಗಲಿದ್ದಾರೆ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರ (Admit Card) ಅನ್ನು ಮುಂಚಿತವಾಗಿ ಡೌನ್ಲೋಡ್ ಮಾಡಿಕೊಂಡು ಅದರಲ್ಲಿರುವ ಎಲ್ಲಾ ವಿವರಗಳನ್ನು ಪರಿಶೀಲಿಸಬೇಕು ಎಂದು ಎನ್ಟಿಎ ಸೂಚಿಸಿದೆ. ಪರೀಕ್ಷೆಯ ದಿನಾಂಕ, ಪಾಳಿ, ಸಮಯ ಮತ್ತು ಪರೀಕ್ಷಾ ಕೇಂದ್ರದ ಮಾಹಿತಿಯನ್ನು ಕಡ್ಡಾಯವಾಗಿ ದೃಢಪಡಿಸಿಕೊಳ್ಳುವಂತೆ ತಿಳಿಸಲಾಗಿದೆ.
ಅದರ ಜೊತೆಗೆ, ವಿಶೇಷ ಚೇತನ (PwD/PwBD) ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಸ್ಥಳ ಹಾಗೂ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳಲು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡುವುದು ಒಳಿತು ಎಂದು ಎನ್ಟಿಎ ಸಲಹೆ ನೀಡಿದೆ.
ಪರೀಕ್ಷೆಯ ಸುಗಮ ಮತ್ತು ಪಾರದರ್ಶಕ ನಿರ್ವಹಣೆಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿರುವುದಾಗಿ ಎನ್ಟಿಎ ತಿಳಿಸಿದೆ.


