ಪ್ಯಾರಿಸ್: ಭಾರತವು ಜಾಗತಿಕ ಮಟ್ಟದಲ್ಲಿ ವಿಶ್ವಾಸಾರ್ಹ ಮತ್ತು ಸ್ಥಿರ ಪಾಲುದಾರ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ವ್ಯಾಪಾರದ ಜೊತೆಗೆ ವಿಶ್ವಾಸವೂ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.
ಹಿಂದೆ ದೇಶಗಳ ನಡುವಿನ ಬಾಂಧವ್ಯವು ಕೇವಲ ವ್ಯಾಪಾರದ ಆಧಾರದ ಮೇಲೆ ನಿರ್ಧಾರವಾಗುತ್ತಿತ್ತು. ಆದರೆ ಈಗ ವಿಶ್ವಾಸ, ಸ್ಥಿರತೆ ಮತ್ತು ದೀರ್ಘಕಾಲಿಕ ಸಹಭಾಗಿತ್ವಗಳಿಗೆ ಹೆಚ್ಚಿನ ಮಹತ್ವ ದೊರೆಯುತ್ತಿದೆ ಎಂದು ಪ್ರಧಾನಿ ಹೇಳಿದರು. ವಿಶ್ವದ ರಾಷ್ಟ್ರಗಳು ವಿಶ್ವಾಸಾರ್ಹ ಪೂರೈಕೆ ಸರಪಳಿ ಹಾಗೂ ನಂಬಿಕೆಯ ಪಾಲುದಾರರನ್ನು ಹುಡುಕುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.
ಭಾರತವು ಮುಂದಿನ ಪೀಳಿಗೆಯ ಬೆಳವಣಿಗೆ, ನವೋದ್ಯಮ ಮತ್ತು ಉದ್ಯೋಗಾವಕಾಶಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಿದೆ. ದೇಶದ ಅಭಿವೃದ್ಧಿ ಪಯಣದಲ್ಲಿ ಇದು ಮಹತ್ವದ ಘಟ್ಟವಾಗಿದ್ದು, ಜನರ ಆಶೋತ್ತರಗಳು ಹೊಸ ಎತ್ತರ ತಲುಪುತ್ತಿವೆ ಎಂದು ಪ್ರಧಾನಿ ಹೇಳಿದರು.
ಎವಿಯನ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ವಿಶ್ವಾಸ ಆಧಾರಿತ ಜಾಗತಿಕ ಸಹಭಾಗಿತ್ವದ ಅಗತ್ಯವನ್ನು ಒತ್ತಿಹೇಳಿದ್ದಾಗಿ ಮೋದಿ ತಿಳಿಸಿದರು. ಜಾಗತಿಕ ಆಡಳಿತ ವ್ಯವಸ್ಥೆ ಎಲ್ಲರನ್ನು ಒಳಗೊಂಡಾಗ ಮಾತ್ರ ಪರಿಣಾಮಕಾರಿಯಾಗುತ್ತದೆ. ಹಂಚಿಕೆಯ ಬೆಳವಣಿಗೆ ಮಾತ್ರ ಶಾಶ್ವತ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಮತ್ತು ಸವಾಲುಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧಗಳು ವಿಶ್ವಾಸ, ಸ್ಥಿರತೆ ಮತ್ತು ಸಹಕಾರದ ಬಲಿಷ್ಠ ಸ್ತಂಭವಾಗಿ ರೂಪುಗೊಂಡಿವೆ ಎಂದು ಪ್ರಧಾನಿ ಹೇಳಿದರು. ಉಭಯ ರಾಷ್ಟ್ರಗಳು ತಮ್ಮ ಸಂಬಂಧವನ್ನು ವಿಶೇಷ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವದ ಮಟ್ಟಕ್ಕೆ ಏರಿಸಿವೆ ಎಂದರು.
ಮುಂದಿನ ವರ್ಷ ಭಾರತ ಮತ್ತು ಫ್ರಾನ್ಸ್ ಜಂಟಿಯಾಗಿ ಟ್ರಿಶ್ನಾ (TRISHNA) ಉಪಗ್ರಹವನ್ನು ಉಡಾವಣೆ ಮಾಡಲಿದ್ದು, ಇದು ಜಾಗತಿಕ ನೀರು ಮತ್ತು ಆಹಾರ ಭದ್ರತೆಯ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಲಿದೆ ಎಂದು ಅವರು ತಿಳಿಸಿದರು.
ಕಳೆದ 12 ವರ್ಷಗಳಲ್ಲಿ ಭಾರತವು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಪರಿವರ್ತನೆ ಕಂಡಿದ್ದು, ಆರ್ಥಿಕ ಬೆಳವಣಿಗೆಯ ಜೊತೆಗೆ ಜನರ ಬದುಕನ್ನು ಸಬಲಗೊಳಿಸುವ ದಿಕ್ಕಿನಲ್ಲಿ ಮಹತ್ವದ ಸಾಧನೆಗಳನ್ನು ದಾಖಲಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ ಕೋರಿದರು. “ಬೊಂಜೂರ್ ಮೋದಿ” ಹಾಗೂ “ಭಾರತ ಮಾತಾ ಕೀ ಜೈ” ಘೋಷಣೆಗಳು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದವು.


