ನವದೆಹಲಿ: ಫ್ರಾನ್ಸ್ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಗೆ ಮರಳಿದ್ದಾರೆ. ಫ್ರಾನ್ಸ್ ಹಾಗೂ ಸ್ಲೋವಾಕಿಯಾ ಒಳಗೊಂಡ ಎರಡು ರಾಷ್ಟ್ರಗಳ ಪ್ರವಾಸದ ಭಾಗವಾಗಿ ನಡೆದ ಈ ಭೇಟಿಯು ಭಾರತ-ಫ್ರಾನ್ಸ್ ಸಂಬಂಧಗಳಿಗೆ ಹೊಸ ಚೈತನ್ಯ ನೀಡಿದೆ ಎಂದು ವಿಶ್ಲೇಷಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರವಾಸದ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಭಾರತ ಮತ್ತು ಫ್ರಾನ್ಸ್ ನಡುವಿನ ಸ್ನೇಹ ಹಾಗೂ ಸಹಕಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರವಾಸದ ವೇಳೆ ನಿಸ್‌ನಲ್ಲಿ ನಡೆದ ‘ಭಾರತ್ ಇನ್ನೋವೇಟ್ಸ್’ ಕಾರ್ಯಕ್ರಮ, ಎವಿಯನ್‌ನಲ್ಲಿ ನಡೆದ ಜಿ7 ಶೃಂಗಸಭೆ, ಪ್ಯಾರಿಸ್‌ನಲ್ಲಿ ಆಯೋಜಿಸಿದ್ದ ವಿವಾಟೆಕ್ 2026 ತಂತ್ರಜ್ಞಾನ ಸಮ್ಮೇಳನ ಸೇರಿದಂತೆ ಹಲವು ಮಹತ್ವದ ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗವಹಿಸಿದರು. ಜೊತೆಗೆ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿ, ಹಲವು ಪ್ರಮುಖ ಉದ್ಯಮಿಗಳೊಂದಿಗೆ ಸಭೆ ನಡೆಸಿದರು.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್, ಅಲ್ಲಿನ ಸರ್ಕಾರ ಹಾಗೂ ಜನತೆ ನೀಡಿದ ಆತ್ಮೀಯ ಸ್ವಾಗತಕ್ಕೆ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಪ್ರವಾಸವು ಭಾರತ-ಫ್ರಾನ್ಸ್ ವಿಶೇಷ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಮತ್ತಷ್ಟು ಬಲ ತುಂಬಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪ್ರಧಾನಿ ಮೋದಿ ಅವರ ಪ್ರವಾಸದ ಸಮಾರೋಪದ ವೇಳೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಅವರು ಹಿಂದಿಯಲ್ಲಿ ವಿಶೇಷ ವಿದಾಯ ಸಂದೇಶ ನೀಡಿದ್ದು, ಭಾರತದ ನವೋದ್ಯಮ ಸಾಮರ್ಥ್ಯ ಮತ್ತು ಜಾಗತಿಕ ಪ್ರಭಾವವನ್ನು ಶ್ಲಾಘಿಸಿದ್ದಾರೆ. ವಿವಾಟೆಕ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಜಾಗತಿಕ ನವೋದ್ಯಮ ಕ್ಷೇತ್ರದ ನಾಯಕರಿಗೆ ಭಾರತ ಜತೆ ಕೈಜೋಡಿಸುವಂತೆ ಕರೆ ನೀಡಿದ್ದರು.
ಪ್ರವಾಸದ ಅವಧಿಯಲ್ಲಿ ವ್ಯಾಪಾರ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸಾಗರ ಮೂಲಸೌಕರ್ಯ ಹಾಗೂ ಜಾಗತಿಕ ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಹಕಾರ ವಿಸ್ತರಣೆಯ ಕುರಿತು ಮಹತ್ವದ ಚರ್ಚೆಗಳು ನಡೆದವು. ಸೇಂಟ್-ಗೋಬೆನ್, ಮಿಸ್ಟ್ರಲ್ ಎಐ ಹಾಗೂ ಸಿಎಂಎ ಸಿಜಿಎಂ ಸಂಸ್ಥೆಗಳ ಮುಖ್ಯಸ್ಥರು ಭಾರತದಲ್ಲಿ ಹೂಡಿಕೆ ಹಾಗೂ ಸಹಕಾರ ವಿಸ್ತರಣೆಯ ಆಸಕ್ತಿ ವ್ಯಕ್ತಪಡಿಸಿದರು.
ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅವರ ಪ್ರಕಾರ, ಈ ಭೇಟಿಯು ಭಾರತ-ಫ್ರಾನ್ಸ್ ಸಂಬಂಧಗಳನ್ನು ಹಲವು ಪ್ರಮುಖ ಕ್ಷೇತ್ರಗಳಲ್ಲಿ ಮತ್ತಷ್ಟು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.


