ಪ್ಯಾರಿಸ್: ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ರೈಲ್ವೆ ಮತ್ತು ಸಾರಿಗೆ ಕ್ಷೇತ್ರದ ಪ್ರಮುಖ ಸಂಸ್ಥೆಯಾದ ಆಲ್ಸ್ಟೊಮ್ (Alstom) ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮಾರ್ಟಿನ್ ಸಿಯಾನ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.
ಭಾರತ–ಫ್ರಾನ್ಸ್ ಆರ್ಥಿಕ ಮತ್ತು ಕೈಗಾರಿಕಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನಡೆದ ಈ ಸಭೆಯಲ್ಲಿ, ಸುಧಾರಿತ ಸಾರಿಗೆ ವ್ಯವಸ್ಥೆಗಳು, ರೈಲ್ವೆ ಆಧುನೀಕರಣ ಹಾಗೂ ಮೊಬಿಲಿಟಿ ಕ್ಷೇತ್ರದಲ್ಲಿನ ಸಹಭಾಗಿತ್ವದ ಅವಕಾಶಗಳ ಕುರಿತು ಚರ್ಚೆ ನಡೆಯಿತು.
ಸಭೆಯ ವೇಳೆ ಭಾರತದಲ್ಲಿ ಆಲ್ಸ್ಟೊಮ್ ಸಂಸ್ಥೆ ಕೈಗೊಂಡಿರುವ ಹೂಡಿಕೆಗಳು ಮತ್ತು ಉತ್ಪಾದನಾ ಘಟಕಗಳ ಕಾರ್ಯಚಟುವಟಿಕೆಗಳನ್ನು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ಚಟುವಟಿಕೆಗಳು ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಹಾಗೂ ರೈಲ್ವೆ ಕ್ಷೇತ್ರದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿವೆ ಎಂದು ಅವರು ಹೇಳಿದರು.
ಇದೇ ವೇಳೆ, ಮಾರ್ಟಿನ್ ಸಿಯಾನ್ ಭಾರತದಲ್ಲಿ ಸಂಸ್ಥೆಯ ಮುಂದಿನ ವಿಸ್ತರಣಾ ಯೋಜನೆಗಳು ಮತ್ತು ಹೊಸ ಹೂಡಿಕೆಗಳ ಕುರಿತ ಮಾಹಿತಿಯನ್ನು ಹಂಚಿಕೊಂಡರು. ಭಾರತವನ್ನು ಜಾಗತಿಕ ಉತ್ಪಾದನಾ ಮತ್ತು ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಆಲ್ಸ್ಟೊಮ್ ಇನ್ನಷ್ಟು ಸಹಕಾರ ನೀಡಲು ಆಸಕ್ತಿ ತೋರಿದೆ ಎಂದು ತಿಳಿದುಬಂದಿದೆ.
ಭಾರತದ ವೇಗವಾಗಿ ಬೆಳೆಯುತ್ತಿರುವ ಮೂಲಸೌಕರ್ಯ ಮತ್ತು ಸಾರಿಗೆ ಕ್ಷೇತ್ರದಲ್ಲಿ ಫ್ರಾನ್ಸ್ ಕಂಪನಿಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವದ್ದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.


