ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ (ಯುಕೆ) ನಡುವಿನ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (CETA) ಜುಲೈ 15ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಇದೇ ದಿನದಿಂದ ಸಾಮಾಜಿಕ ಭದ್ರತಾ ಒಪ್ಪಂದ ಎಂದೇ ಕರೆಯಲ್ಪಡುವ ಡಬಲ್ ಕಾಂಟ್ರಿಬ್ಯೂಷನ್ ಕನ್ವೆನ್ಷನ್ (DCC) ಕೂಡ ಅನುಷ್ಠಾನಗೊಳ್ಳಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಈ ಒಪ್ಪಂದದಡಿ ಭಾರತೀಯ ತಾತ್ಕಾಲಿಕ ಉದ್ಯೋಗಿಗಳಿಗೆ ಮಹತ್ವದ ಲಾಭ ದೊರೆಯಲಿದ್ದು, ಡಬಲ್ ಕಾಂಟ್ರಿಬ್ಯೂಷನ್ ಕನ್ವೆನ್ಷನ್ ಅಡಿಯಲ್ಲಿ ನೀಡಲಾಗುತ್ತಿದ್ದ ವಿನಾಯಿತಿ ಅವಧಿಯನ್ನು ಮೂರು ವರ್ಷಗಳಿಂದ ಐದು ವರ್ಷಗಳಿಗೆ ವಿಸ್ತರಿಸಲಾಗಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಈ ಒಪ್ಪಂದವನ್ನು ಭಾರತದ ಆರ್ಥಿಕ ರಾಜತಾಂತ್ರಿಕತೆಯ ಮಹತ್ವದ ಸಾಧನೆ ಎಂದು ಬಣ್ಣಿಸಿದ್ದು, CETA ಮತ್ತು DCC ಜಾರಿಗೆ ಬರುವುದರಿಂದ ಭಾರತೀಯ ರಫ್ತು ಕ್ಷೇತ್ರಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿದ್ದಾರೆ.
ಒಪ್ಪಂದದ ಮೂಲಕ ಭಾರತದ ಉತ್ಪನ್ನಗಳಿಗೆ ಯುಕೆ ಮಾರುಕಟ್ಟೆಯಲ್ಲಿ 99 ಶೇಕಡಾ ಸುಂಕ ರಹಿತ ಪ್ರವೇಶ ದೊರೆಯಲಿದೆ. ಇದರಿಂದ ಜವಳಿ, ಚರ್ಮೋದ್ಯಮ, ಸಮುದ್ರ ಆಹಾರ, ಎಂಜಿನಿಯರಿಂಗ್ ಉತ್ಪನ್ನಗಳು ಹಾಗೂ ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಸ್ಪರ್ಧಾತ್ಮಕವಾಗಲಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳ ಸ್ಥಾನ ಮತ್ತಷ್ಟು ಬಲವಾಗಲಿದೆ.
ಸಚಿವಾಲಯದ ಪ್ರಕಾರ, ಈ ಒಪ್ಪಂದವನ್ನು ಜನಕೇಂದ್ರಿತ ದೃಷ್ಟಿಕೋನದಲ್ಲಿ ರೂಪಿಸಲಾಗಿದ್ದು, ಸಮಾಜದ ವಿವಿಧ ವರ್ಗಗಳಿಗೆ ಪ್ರಯೋಜನವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಭಾರತವನ್ನು ಜಾಗತಿಕವಾಗಿ ಸಮಗ್ರ, ಸ್ಪರ್ಧಾತ್ಮಕ ಮತ್ತು ಸ್ಥಿರ ಆರ್ಥಿಕತೆಯಾಗಿ ರೂಪಿಸುವ ದಿಸೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಭಾರತ ಮತ್ತು ಯುಕೆ ನಡುವಿನ ಈ ಹೊಸ ಆರ್ಥಿಕ ಸಹಭಾಗಿತ್ವವು ವ್ಯಾಪಾರ, ಹೂಡಿಕೆ, ಉದ್ಯೋಗ ಮತ್ತು ಕೈಗಾರಿಕಾ ಬೆಳವಣಿಗೆಗೆ ವೇಗ ನೀಡುವುದರ ಜೊತೆಗೆ ‘ವಿಕಸಿತ ಭಾರತ 2047’ ಗುರಿ ಸಾಧನೆಗೆ ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


