ಉತ್ತರ ಪ್ರದೇಶ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜೂನ್ 21ರಂದು ನಡೆಯಲಿರುವ NEET ಪರೀಕ್ಷೆಯನ್ನು ಸುಗಮ ಮತ್ತು ಪಾರದರ್ಶಕವಾಗಿ ನಡೆಸಲು ಅಧಿಕಾರಿಗಳಿಗೆ ಮಹತ್ವದ ನಿರ್ದೇಶನಗಳನ್ನು ನೀಡಿದ್ದಾರೆ. ರಾಜ್ಯದ 59 ಜಿಲ್ಲೆಗಳಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ಸುಮಾರು 3.5 ಲಕ್ಷ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ, ಪ್ರವೇಶ ಪತ್ರ (Admit Card) ತೋರಿಸಿದ ಅಭ್ಯರ್ಥಿಗಳಿಗೆ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (UPSRTC) ಬಸ್‌ಗಳಲ್ಲಿ ಪ್ರಯಾಣ ದರದಲ್ಲಿ ಶೇಕಡಾ 50 ರಿಯಾಯಿತಿ ನೀಡಲು ಮುಖ್ಯಮಂತ್ರಿ ಸೂಚಿಸಿದ್ದಾರೆ.
ಇದಲ್ಲದೆ, ಪರೀಕ್ಷೆಗಾಗಿ ಇತರೆ ಜಿಲ್ಲೆಗಳಿಗೆ ಪ್ರಯಾಣಿಸುವ ಅಭ್ಯರ್ಥಿಗಳಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ವಸತಿ ಸಮಸ್ಯೆ ಎದುರಿಸುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
ಪರೀಕ್ಷೆಯ ಪಾವಿತ್ರ್ಯ, ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ.
ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಪರೀಕ್ಷೆಗೆ ಸಂಬಂಧಿಸಿದ ವದಂತಿಗಳು, ಸುಳ್ಳು ಮಾಹಿತಿ ಅಥವಾ ದಾರಿತಪ್ಪಿಸುವ ಪೋಸ್ಟ್‌ಗಳು ಹರಡದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಪ್ಪು ಮಾಹಿತಿ ಹರಡುವವರ ವಿರುದ್ಧ ತ್ವರಿತ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ.


