ನವದೆಹಲಿ: ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ಭಾರತವನ್ನು ಸಂಪರ್ಕಿಸುವ ಪ್ರಸ್ತಾವಿತ ಆಳ ಸಮುದ್ರ ಇಂಧನ ಪೈಪ್‌ಲೈನ್ (Deepwater Energy Pipeline) ಯೋಜನೆ ಕುರಿತು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವರದಿಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟನೆ ನೀಡಿದೆ.
ಈ ಯೋಜನೆ ಸದ್ಯ ಸಚಿವಾಲಯದ ಪರಿಗಣನೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವಾಲಯ, ಗುಜರಾತ್ ಮತ್ತು ಒಮಾನ್ ಸೇರಿದಂತೆ ಗಲ್ಫ್ ರಾಷ್ಟ್ರಗಳನ್ನು ಸಂಪರ್ಕಿಸುವ ‘ಮಿಡಲ್ ಈಸ್ಟ್-ಇಂಡಿಯಾ ಡೀಪ್‌ವಾಟರ್ ಪೈಪ್‌ಲೈನ್’ ಯೋಜನೆಯನ್ನು ಸರ್ಕಾರ ಸಕ್ರಿಯವಾಗಿ ಮುಂದುವರಿಸುತ್ತಿದೆ ಎಂಬ ವರದಿಗಳು ವಾಸ್ತವಕ್ಕೆ ದೂರವಾಗಿವೆ ಎಂದು ತಿಳಿಸಿದೆ.
ಈ ಕುರಿತು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಒಮಾನ್ ಅಥವಾ ಇತರೆ ಯಾವುದೇ ಗಲ್ಫ್ ರಾಷ್ಟ್ರಗಳೊಂದಿಗೆ ಇಂತಹ ಯೋಜನೆ ಸಂಬಂಧಿಸಿದಂತೆ ಸಚಿವಾಲಯದ ಯಾವುದೇ ಹಂತದಲ್ಲೂ ಸಕ್ರಿಯ ಚರ್ಚೆ, ಮಾತುಕತೆ ಅಥವಾ ಅಧಿಕೃತ ಸಮಾಲೋಚನೆಗಳು ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ಭಾರತ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವೆ ಸಮುದ್ರದಾಳದ ಮೂಲಕ ಇಂಧನ ಸಾಗಣೆ ಪೈಪ್‌ಲೈನ್ ನಿರ್ಮಾಣದ ಯೋಜನೆಗೆ ಸರ್ಕಾರ ವೇಗ ನೀಡುತ್ತಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಈ ಹಿನ್ನೆಲೆಯಲ್ಲಿ ಗೊಂದಲ ನಿವಾರಿಸಲು ಸಚಿವಾಲಯ ಅಧಿಕೃತ ಸ್ಪಷ್ಟನೆ ನೀಡಿದೆ.
ಸದ್ಯ ಭಾರತ ತನ್ನ ಇಂಧನ ಭದ್ರತೆ ಮತ್ತು ಪೂರೈಕೆ ಮೂಲಗಳ ವಿಸ್ತರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಉಲ್ಲೇಖಿತ ಡೀಪ್‌ವಾಟರ್ ಪೈಪ್‌ಲೈನ್ ಯೋಜನೆ ಬಗ್ಗೆ ಯಾವುದೇ ಅಧಿಕೃತ ಪ್ರಸ್ತಾವನೆ ಇಲ್ಲ ಎಂದು ಸಚಿವಾಲಯ ಪುನರುಚ್ಚರಿಸಿದೆ.


