ನ್ಯಾಯ ಸೇವೆ ಎಲ್ಲರಿಗೂ ಸುಲಭವಾಗಿಸಲು DISHA 2.0 ಕಾರ್ಯಾಗಾರ ಇಂದು

1 Min Read
1 Min Read

ದಕ್ಷಿಣ ಗೋವಾ: ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ವತಿಯಿಂದ DISHA 2.0 (Designing Innovative Solutions for Holistic Access to Justice) ಯೋಜನೆಯಡಿ ಇಂದು ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ.

ದಕ್ಷಿಣ ಗೋವಾದ ಇಂಡಿಯಾ ಇಂಟರ್‌ನ್ಯಾಷನಲ್ ಯೂನಿವರ್ಸಿಟಿ ಆಫ್ ಲೀಗಲ್ ಎಜುಕೇಶನ್ ಆ್ಯಂಡ್ ರಿಸರ್ಚ್ನ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ, ತಂತ್ರಜ್ಞಾನ ಆಧಾರಿತ ಕಾನೂನು ಸೇವೆಗಳ ಮೂಲಕ ಜನರಿಗೆ ನ್ಯಾಯದ ಲಭ್ಯತೆಯನ್ನು ಮತ್ತಷ್ಟು ಸುಲಭಗೊಳಿಸುವ ಕುರಿತು ಚರ್ಚೆ ನಡೆಯಲಿದೆ.

ಕಾನೂನು ಅರಿವು ಹೆಚ್ಚಿಸುವುದು, ಅಗತ್ಯವಿರುವವರಿಗೆ ಉಚಿತ ಕಾನೂನು ನೆರವು ಒದಗಿಸುವುದು ಹಾಗೂ ತಂತ್ರಜ್ಞಾನವನ್ನು ಬಳಸಿಕೊಂಡು ನ್ಯಾಯ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಕಾರ್ಯಾಗಾರದ ಪ್ರಮುಖ ವಿಚಾರಗಳಾಗಿವೆ.

ಕಾರ್ಯಕ್ರಮದಲ್ಲಿ ‘ನ್ಯಾಯ ಪ್ರಬೋಧ್: Awakening to Justice – Know Your Rights in 90 Seconds’ ಅಭಿಯಾನದಡಿ ಸಿದ್ಧಪಡಿಸಲಾದ ಅತ್ಯುತ್ತಮ ರೀಲ್ಸ್‌ಗಳನ್ನು ಪ್ರದರ್ಶಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ‘ನ್ಯಾಯ ಪ್ರಬೋಧ್’ ಅಭಿಯಾನದ ಭಾಗವಾಗಿ ಘೋಷವಾಕ್ಯ ಸ್ಪರ್ಧೆಯನ್ನೂ ಆರಂಭಿಸಲಾಗುತ್ತದೆ.

ಇದರ ಜತೆಗೆ ‘ನ್ಯಾಯ ಬಂಧು ಪ್ರೊ ಬೋನೊ ಕಾನೂನು ಸೇವಾ ಕಾರ್ಯಕ್ರಮ’ ಕುರಿತ ವಿಶೇಷ ಅಧಿವೇಶನವೂ ನಡೆಯಲಿದೆ. ಆರ್ಥಿಕವಾಗಿ ಹಿಂದುಳಿದವರು ಹಾಗೂ ಕಾನೂನು ನೆರವು ಪಡೆಯಲು ಕಷ್ಟಪಡುವ ಜನರಿಗೆ ಉಚಿತ ಕಾನೂನು ಸಹಾಯ ದೊರಕಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.

ಜನರಿಗೆ ಕಾನೂನು ಸೇವೆಗಳು ಸುಲಭವಾಗಿ ಲಭ್ಯವಾಗುವಂತೆ ಮಾಡಲು ನ್ಯಾಯ ಇಲಾಖೆ ಹಲವು ಉಪಕ್ರಮಗಳನ್ನು ಜಾರಿಗೊಳಿಸುತ್ತಿದೆ. ಟೆಲಿ-ಲಾ, ನ್ಯಾಯ ಬಂಧು, ಕಾನೂನು ಸಾಕ್ಷರತೆ ಮತ್ತು ಕಾನೂನು ಅರಿವು ಕಾರ್ಯಕ್ರಮಗಳು ಹಾಗೂ VIDHI-ಸಂಜೀವನಿ ಮುಂತಾದ ಯೋಜನೆಗಳ ಮೂಲಕ ದೂರದ ಹಾಗೂ ಸೇವೆಗಳು ಕಡಿಮೆ ಲಭ್ಯವಿರುವ ಪ್ರದೇಶಗಳ ಜನರಿಗೂ ಕಾನೂನು ನೆರವು ತಲುಪಿಸುವ ಪ್ರಯತ್ನ ನಡೆಯುತ್ತಿದೆ.

ಕಾನೂನು ಸೇವೆಗಳು ಜನರಿಗೆ ಹೆಚ್ಚು ಸುಲಭವಾಗಿ ಅರ್ಥವಾಗುವ, ಕೈಗೆಟುಕುವ ಮತ್ತು ಪರಿಣಾಮಕಾರಿಯಾಗಿ ಲಭ್ಯವಾಗುವಂತೆ ಮಾಡುವುದೇ ಈ ಉಪಕ್ರಮಗಳ ಪ್ರಮುಖ ಉದ್ದೇಶವಾಗಿದೆ.

Share This Article