ನವದೆಹಲಿ: ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪರಸ್ಪರ ಸಹಕಾರ ಹಾಗೂ ಸಮನ್ವಯವನ್ನು ಮುಂದುವರಿಸಲು ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಬದ್ಧತೆಯನ್ನು ಪುನರುಚ್ಚರಿಸಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇಂದು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಉಭಯ ನಾಯಕರು ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು.
ಭಾರತ–ಯುಎಇ ನಡುವಿನ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಕೂಡ ಇಬ್ಬರೂ ನಾಯಕರು ಚರ್ಚಿಸಿದರು. ಇಂಧನ, ರಕ್ಷಣಾ, ತಂತ್ರಜ್ಞಾನ, ಹೂಡಿಕೆ ಮತ್ತು ಆರೋಗ್ಯ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಹೊಸ ಕ್ರಮಗಳ ಕುರಿತು ಮಾತುಕತೆ ನಡೆಯಿತು.
ಭಾರತದ ಬ್ರಿಕ್ಸ್ ಅಧ್ಯಕ್ಷತೆಗೆ ಯುಎಇ ಅಭಿನಂದನೆ
ಭಾರತದ ಯಶಸ್ವಿ ಬ್ರಿಕ್ಸ್ ಅಧ್ಯಕ್ಷತೆಗೆ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದರು.
ಬ್ರಿಕ್ಸ್ ಶೃಂಗಸಭೆಯಲ್ಲಿ ಯುಎಇ ಕ್ರೌನ್ ಪ್ರಿನ್ಸ್ ಶೇಖ್ ಖಾಲಿದ್ ಭಾಗವಹಿಸಿದ್ದನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ಚೌಕಟ್ಟಿನಡಿ ಮಹತ್ವದ ಫಲಿತಾಂಶಗಳನ್ನು ಸಾಧಿಸಲು ಯುಎಇ ನೀಡಿದ ಸಹಕಾರ ಮತ್ತು ಪಾಲುದಾರಿಕೆಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


