ರೈಲು ಸಂಪರ್ಕಕ್ಕೆ ಬಿಗ್ ಬೂಸ್ಟ್: 8 ಬಹುಹಳಿ ಯೋಜನೆಗಳಿಗೆ ಸಂಪುಟ ಅನುಮೋದನೆ

3 Min Read
3 Min Read

ನವದೆಹಲಿ: ದೇಶದ ಪ್ರಮುಖ ರೈಲು ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಿ, ರೈಲುಗಳ ಕಾರ್ಯಾಚರಣಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ₹20,800 ಕೋಟಿಗೂ ಅಧಿಕ ಮೊತ್ತದ 8 ಬಹುಹಳಿ ರೈಲ್ವೆ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಯೋಜನೆಗಳಿಂದ ರೈಲು ಮಾರ್ಗಗಳ ಸಾಮರ್ಥ್ಯ ಹೆಚ್ಚುವುದರ ಜೊತೆಗೆ ಕಾರ್ಯಾಚರಣೆಯ ದಕ್ಷತೆ ಸುಧಾರಿಸಲಿದೆ ಮತ್ತು ಪ್ರಮುಖ ಮಾರ್ಗಗಳಲ್ಲಿನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಸಂಪುಟ ಸಭೆಯ ಬಳಿಕ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ಮೊದಲ ಹಂತದ ಮೂರು ಯೋಜನೆಗಳಿಗೆ ₹10,783 ಕೋಟಿಗೂ ಅಧಿಕ ವೆಚ್ಚವಾಗಲಿದೆ ಎಂದು ತಿಳಿಸಿದರು. ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದ 14 ಜಿಲ್ಲೆಗಳನ್ನು ಒಳಗೊಂಡ ಈ ಯೋಜನೆಗಳಿಂದ ರೈಲ್ವೆ ಜಾಲಕ್ಕೆ ಸುಮಾರು 656 ಕಿ.ಮೀ. ಹೆಚ್ಚುವರಿ ಮಾರ್ಗ ಸೇರ್ಪಡೆಯಾಗಲಿದೆ.

ಇವುಗಳಲ್ಲಿ ಖರಗ್‌ಪುರ–ಝಾರ್ಸುಗುಡಾ ನಾಲ್ಕನೇ ಹಳಿ, ಕಟ್ನಿ–ಪೇಂದ್ರ ರೋಡ್ ನಾಲ್ಕನೇ ಹಳಿ ಹಾಗೂ ಬಿಲಾಸ್ಪುರ–ಪೇಂದ್ರ ರೋಡ್ ಮೂರನೇ ಹಳಿ ಯೋಜನೆಗಳು ಸೇರಿವೆ. ಈ ಯೋಜನೆಗಳನ್ನು 2029–30ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಇನ್ನುಳಿದ ಐದು ಯೋಜನೆಗಳಿಗೆ ಸುಮಾರು ₹10,021 ಕೋಟಿ ವೆಚ್ಚವಾಗಲಿದ್ದು, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಹಾಗೂ ತೆಲಂಗಾಣದ 17 ಜಿಲ್ಲೆಗಳಿಗೆ ಇದರ ಪ್ರಯೋಜನ ದೊರೆಯಲಿದೆ. ಈ ಯೋಜನೆಗಳಿಂದ ರೈಲ್ವೆ ಜಾಲಕ್ಕೆ ಸುಮಾರು 540 ಕಿ.ಮೀ. ಹೆಚ್ಚುವರಿ ಮಾರ್ಗ ಸೇರ್ಪಡೆಯಾಗಲಿದೆ.

ಅರಕ್ಕೋಣಂ–ರೇಣಿಗುಂಟಾ ಮೂರನೇ ಮತ್ತು ನಾಲ್ಕನೇ ಹಳಿ, ವೈಟ್‌ಫೀಲ್ಡ್–ಬಂಗಾರಪೇಟೆ ಮೂರನೇ ಮತ್ತು ನಾಲ್ಕನೇ ಹಳಿ ಹಾಗೂ ಹೊಸೂರು–ಓಮಲೂರು ಮಾರ್ಗದ ದ್ವಿಗುಣಗೊಳಿಸುವಿಕೆ ಈ ಯೋಜನೆಗಳಲ್ಲಿ ಪ್ರಮುಖವಾಗಿವೆ.

ಈ ಯೋಜನೆಗಳ ಮೂಲಕ ಸುಮಾರು 2,100 ಗ್ರಾಮಗಳಿಗೆ ರೈಲು ಸಂಪರ್ಕ ಮತ್ತಷ್ಟು ಸುಧಾರಿಸಲಿದ್ದು, ಸುಮಾರು 52 ಲಕ್ಷ ಜನರಿಗೆ ಪ್ರಯೋಜನವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

7 ಪ್ರಮುಖ ರೈಲು ಮಾರ್ಗಗಳಿಗೆ ನಾಲ್ಕು ಹಳಿಗಳ ವಿಸ್ತರಣೆ

ದೇಶದ ಏಳು ಪ್ರಮುಖ ಅಧಿಕ ದಟ್ಟಣೆಯ ರೈಲು ಕಾರಿಡಾರ್‌ಗಳನ್ನು ನಾಲ್ಕು ಹಳಿಗಳನ್ನಾಗಿ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಒಟ್ಟು ಸುಮಾರು 11,000 ಕಿ.ಮೀ. ಉದ್ದದ ಈ ಕಾರಿಡಾರ್‌ಗಳಲ್ಲಿ ದೆಹಲಿ–ಹೌರಾ, ಮುಂಬೈ–ಹೌರಾ, ದೆಹಲಿ–ಮುಂಬೈ, ದೆಹಲಿ–ಗುವಾಹಟಿ, ದೆಹಲಿ–ಚೆನ್ನೈ, ಹೌರಾ–ಚೆನ್ನೈ ಹಾಗೂ ಮುಂಬೈ–ಚೆನ್ನೈ ಮಾರ್ಗಗಳು ಸೇರಿವೆ.

ಈಗಾಗಲೇ ಸುಮಾರು 2,000 ಕಿ.ಮೀ. ಮಾರ್ಗವನ್ನು ನಾಲ್ಕು ಹಳಿಗಳಾಗಿ ವಿಸ್ತರಿಸುವ ಕಾಮಗಾರಿ ಪೂರ್ಣಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.

ಮುಂದಿನ ವರ್ಷ ಬುಲೆಟ್ ರೈಲು ಸೇವೆ ಆರಂಭ

ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಕಾಮಗಾರಿಯೂ ವೇಗವಾಗಿ ಪ್ರಗತಿಯಲ್ಲಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು. ಮುಂದಿನ ವರ್ಷ ಬುಲೆಟ್ ರೈಲು ಸೇವೆ ಆರಂಭವಾಗಲಿದ್ದು, ಆರಂಭಿಕ ಹಂತದಲ್ಲಿ ಸೂರತ್–ವಾಪಿ ನಡುವಿನ 100 ಕಿ.ಮೀ. ಮಾರ್ಗದಲ್ಲಿ ಸೇವೆ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.

ಸಂಪರ್ಕ, ಸರಕು ಸಾಗಣೆ ಮತ್ತಷ್ಟು ಬಲ: ಪ್ರಧಾನಿ ಮೋದಿ

ರೈಲ್ವೆ ಬಹುಹಳಿ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ನೀಡಿರುವ ಅನುಮೋದನೆಯಿಂದ ಪ್ರಯಾಣಿಕರ ಸಂಚಾರ ವೇಗಗೊಳ್ಳುವುದರ ಜೊತೆಗೆ ಸಂಪರ್ಕ ವ್ಯವಸ್ಥೆ ಮತ್ತಷ್ಟು ಬಲಪಡಲಿದೆ ಮತ್ತು ಸರಕು ಸಾಗಣೆ ಸಾಮರ್ಥ್ಯ ಹೆಚ್ಚಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಶೇಷವಾಗಿ ದಕ್ಷಿಣ ಭಾರತದಲ್ಲಿ ರೈಲು ಸಂಪರ್ಕ ವ್ಯವಸ್ಥೆ ಬಲಪಡಿಸುವ ಈ ಯೋಜನೆಗಳಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ರೈಲು ಜಾಲ ವಿಸ್ತರಣೆಯಾಗುವುದರಿಂದ ಸಂಪರ್ಕ ವ್ಯವಸ್ಥೆ ಸುಧಾರಿಸಲಿದೆ. ಇದರೊಂದಿಗೆ ಪ್ರವಾಸೋದ್ಯಮ, ವಿಶೇಷವಾಗಿ ಪಾರಂಪರಿಕ ಮತ್ತು ವನ್ಯಜೀವಿ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದ್ದು, ಸರಕು ಸಾಗಣೆ ವೆಚ್ಚವೂ ಕಡಿಮೆಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Share This Article