ಮಹಿಳಾ ಉದ್ಯಮಿಗಳ ಸಬಲೀಕರಣಕ್ಕೆ BRICS ರಾಷ್ಟ್ರಗಳು ಕೈಜೋಡಿಸಲಿ: ಗೋಯಲ್

2 Min Read
2 Min Read

ನವದೆಹಲಿ: ಜಾಗತಿಕ ವ್ಯಾಪಾರ ಕ್ಷೇತ್ರದಲ್ಲಿ ಮಹಿಳಾ ಉದ್ಯಮಿಗಳು ಹಾಗೂ ಮಹಿಳೆಯರ ನೇತೃತ್ವದ ಉದ್ಯಮಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲು BRICS ರಾಷ್ಟ್ರಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಕರೆ ನೀಡಿದ್ದಾರೆ.

ನವದೆಹಲಿಯಲ್ಲಿ ನಿನ್ನೆ ನಡೆದ BRICS WBA ಮಹಿಳಾ ನೇತೃತ್ವದ ಅಭಿವೃದ್ಧಿ ಸಮ್ಮೇಳನದಲ್ಲಿ ಮಾತನಾಡಿದ ಪಿಯೂಷ್ ಗೋಯಲ್, ಮಹಿಳಾ ಉದ್ಯಮಿಗಳಿಗೆ ಸಾಲ ಮತ್ತು ಮಾರುಕಟ್ಟೆ ಪ್ರವೇಶವನ್ನು ಸುಲಭಗೊಳಿಸುವುದರ ಜೊತೆಗೆ, ಸ್ಥಿರ ಹಾಗೂ ನಿರೀಕ್ಷಿಸಬಹುದಾದ ವ್ಯಾಪಾರ ನಿಯಮಗಳನ್ನು ರೂಪಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಮಹಿಳೆಯರನ್ನು ದೇಶದ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲಕಶಕ್ತಿಗಳನ್ನಾಗಿ ರೂಪಿಸುವುದು ಭಾರತದ ಪ್ರಮುಖ ಆದ್ಯತೆಯಾಗಿದೆ ಎಂದು ಸಚಿವರು ಹೇಳಿದರು. ಆರ್ಥಿಕ ಒಳಗೊಳ್ಳುವಿಕೆ, ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಜೀವನಮಟ್ಟ ಸುಧಾರಣೆಯ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಒತ್ತು ನೀಡುತ್ತಿದೆ ಎಂದು ತಿಳಿಸಿದರು.

ದೇಶದಲ್ಲಿ ಸುಮಾರು 30 ಕೋಟಿ ಮಹಿಳೆಯರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಎಂದು ಪಿಯೂಷ್ ಗೋಯಲ್ ಹೇಳಿದರು. ಸ್ವಂತ ಉದ್ಯಮ ಅಥವಾ ಕೆಲಸ ಆರಂಭಿಸಲು ಬಯಸುವ ಮಹಿಳೆಯರಿಗೆ, ಅವರ ಹಿಂದಿನ ಸಾಲದ ದಾಖಲೆ ಇಲ್ಲದಿದ್ದರೂ, ಯಾವುದೇ ಆಸ್ತಿ ಅಡಮಾನವಿಲ್ಲದೆ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಲಖಪತಿ ದೀದಿ’ ಉಪಕ್ರಮದಡಿ ಸುಮಾರು 10 ಕೋಟಿ ಗ್ರಾಮೀಣ ಮಹಿಳೆಯರು 90 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಸಂಘಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಸಚಿವರು ತಿಳಿಸಿದರು. ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸುವುದು ಮತ್ತು ದೇಶದ ಆರ್ಥಿಕ ಪ್ರಗತಿಗೆ ಅವರ ಕೊಡುಗೆಯನ್ನು ಹೆಚ್ಚಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.

ಅಂತಾರಾಷ್ಟ್ರೀಯ ವಸ್ತುಪ್ರದರ್ಶನಗಳು, ಸಮ್ಮೇಳನಗಳು, ವಿಚಾರ ಸಂಕಿರಣಗಳು, ಪ್ರದರ್ಶನಗಳು ಹಾಗೂ ವಿವಿಧ ವ್ಯಾಪಾರ ವೇದಿಕೆಗಳಲ್ಲಿ ಮಹಿಳೆಯರ ಒಡೆತನದ ಉದ್ಯಮಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸರ್ಕಾರಗಳು ಉತ್ತೇಜನ ನೀಡಬೇಕು ಎಂದು ಗೋಯಲ್ ಕರೆ ನೀಡಿದರು.

BRICS ರಾಷ್ಟ್ರಗಳ ನಡುವೆ ಹೆಚ್ಚಿನ ಸಂವಾದ ಮತ್ತು ಸಹಕಾರದ ಅಗತ್ಯವನ್ನು ಒತ್ತಿ ಹೇಳಿದ ಅವರು, ಸದಸ್ಯ ರಾಷ್ಟ್ರಗಳು, ಪಾಲುದಾರ ರಾಷ್ಟ್ರಗಳು ಹಾಗೂ ಇಡೀ ಜಗತ್ತಿನ ಸಮೃದ್ಧ ಭವಿಷ್ಯಕ್ಕೆ ಸಂವಾದ ಮತ್ತು ರಾಜತಾಂತ್ರಿಕತೆ ಪ್ರಮುಖ ಮಾರ್ಗಗಳಾಗಿವೆ ಎಂದು ಹೇಳಿದರು.

2047ರಲ್ಲಿ ಭಾರತ ಸ್ವಾತಂತ್ರ್ಯದ 100ನೇ ವರ್ಷವನ್ನು ಆಚರಿಸುವ ವೇಳೆಗೆ, ಪ್ರಸ್ತುತ ಸುಮಾರು 4 ಟ್ರಿಲಿಯನ್ ಡಾಲರ್ ಆರ್ಥಿಕತೆಯಿಂದ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಯುವ ಗುರಿಯನ್ನು ಭಾರತ ಹೊಂದಿದೆ ಎಂದು ಪಿಯೂಷ್ ಗೋಯಲ್ ತಿಳಿಸಿದರು.

Share This Article