ನವದೆಹಲಿ, ಆಗಸ್ಟ್ 29: ದೇಶದಲ್ಲಿ ಸಕ್ಕರೆ ಕೊರತೆಯಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದು, ಸಮರ್ಪಕ ಪೂರೈಕೆ ಖಚಿತಪಡಿಸುವ ಜೊತೆಗೆ ಗ್ರಾಹಕರಿಗೆ ಸಮಂಜಸ ಬೆಲೆಯಲ್ಲಿ ಸಕ್ಕರೆ ಲಭ್ಯವಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.
ಗ್ರಾಹಕ ವ್ಯವಹಾರಗಳ ಸಚಿವಾಲಯದ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಕಾರ್ಖಾನೆಗಳಿಂದ ಹೊರಬರುವ ಸಕ್ಕರೆಯ ಎಕ್ಸ್-ಮಿಲ್ ಬೆಲೆ ಸುಮಾರು ಶೇ.20ರಷ್ಟು ಇಳಿಕೆಯಾಗಿದೆ. ಇದರ ಪರಿಣಾಮವಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿಯೂ ಸಕ್ಕರೆ ಬೆಲೆ ಇಳಿಯುವ ಲಕ್ಷಣಗಳು ಕಂಡುಬರುತ್ತಿವೆ ಎಂದು ಸಚಿವಾಲಯ ತಿಳಿಸಿದೆ.
ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಪೂರೈಕೆಯಲ್ಲಿ ಕೃತಕ ಕೊರತೆ ಸೃಷ್ಟಿಯಾಗದಂತೆ ಹಾಗೂ ಸಮರ್ಪಕ ಲಭ್ಯತೆ ಕಾಪಾಡಲು ಸರ್ಕಾರ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ದೇಶಾದ್ಯಂತ ಸಕ್ಕರೆಯ ಬೆಲೆ, ದಾಸ್ತಾನು ಮತ್ತು ಸಾಗಣೆ ವ್ಯವಸ್ಥೆಯನ್ನು ಸರ್ಕಾರ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಮಾರುಕಟ್ಟೆಗೆ ಅಗತ್ಯ ಪ್ರಮಾಣದಲ್ಲಿ ಸಕ್ಕರೆ ಸಮಯಕ್ಕೆ ಸರಿಯಾಗಿ ತಲುಪುವಂತೆ ಮಾಡಲು ಹಾಲಿ ಮಾಸಿಕ ಕೋಟಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ನಿರ್ಧರಿಸಲಾಗಿದೆ.
ಮುಂದಿನ ತಿಂಗಳಿಂದ 15 ದಿನಕ್ಕೊಮ್ಮೆ ಸಕ್ಕರೆ ಹಂಚಿಕೆ
ಮುಂದಿನ ತಿಂಗಳಿಂದ ಪ್ರತಿ 15 ದಿನಗಳಿಗೊಮ್ಮೆ ಸಕ್ಕರೆ ಹಂಚಿಕೆ ಮಾಡುವ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಇದುವರೆಗೆ ಜಾರಿಯಲ್ಲಿದ್ದ ಮಾಸಿಕ ಕೋಟಾ ವ್ಯವಸ್ಥೆಯ ಬದಲಿಗೆ ಈ ಹೊಸ ವ್ಯವಸ್ಥೆ ಬರಲಿದೆ.
ಹೊಸ ವ್ಯವಸ್ಥೆಯಿಂದ ಸಕ್ಕರೆ ಪೂರೈಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಲಿದ್ದು, ಮಾರುಕಟ್ಟೆಯಲ್ಲಿ ಕೃತಕ ಪೂರೈಕೆ ಕೊರತೆ ಉಂಟಾಗುವುದನ್ನು ತಡೆಯುವ ಜೊತೆಗೆ ಗ್ರಾಹಕರಿಗೆ ಸಕ್ಕರೆ ಸಮಯಕ್ಕೆ ಸರಿಯಾಗಿ ಲಭ್ಯವಾಗುವಂತೆ ಮಾಡಲು ಸಹಾಯವಾಗಲಿದೆ ಎಂದು ಸರ್ಕಾರ ತಿಳಿಸಿದೆ.


