ಎಸ್‌ಟಿಪಿ ಟೆಂಡರ್‌ ಅಕ್ರಮ ಆರೋಪ: ಎಎಪಿ ನಾಯಕ ಸತ್ಯೇಂದ್ರ ಜೈನ್ ಸೇರಿ ಆರು ಮಂದಿಯನ್ನು ಬಂಧಿಸಿದ ಎಸಿಬಿ

1 Min Read
1 Min Read

ದೆಹಲಿ ಜಲ ಮಂಡಳಿಯ ಒಳಚರಂಡಿ ಸಂಸ್ಕರಣಾ ಘಟಕಗಳ (STP) ವಿಸ್ತರಣೆ ಮತ್ತು ಮೇಲ್ದರ್ಜೆಗೇರಿಸುವ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಹಾಗೂ ಕ್ರಿಮಿನಲ್‌ ಸಂಚು ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರದ ಭ್ರಷ್ಟಾಚಾರ ನಿಗ್ರಹ ದಳ (ACB) ಮಾಜಿ ಸಚಿವ ಹಾಗೂ ಆಮ್ ಆದ್ಮಿ ಪಕ್ಷದ (AAP) ನಾಯಕ ಸತ್ಯೇಂದ್ರ ಕುಮಾರ್ ಜೈನ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿದೆ.

ಬಂಧಿತರಲ್ಲಿ ದೆಹಲಿ ಜಲ ಮಂಡಳಿಯ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಉದಿತ್ ಪ್ರಕಾಶ್ ರೈ ಹಾಗೂ ಇತರ ನಾಲ್ವರು ಆರೋಪಿಗಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಜಲ ಮಂಡಳಿಯ STPಗಳ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಅವುಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್‌ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇರೆಗೆ ಈ ಪ್ರಕರಣ ದಾಖಲಾಗಿತ್ತು. ವಿಜಿಲೆನ್ಸ್‌ ನಿರ್ದೇಶನಾಲಯ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಲಾಗಿತ್ತು.

ತನಿಖೆಯ ವೇಳೆ, ಟೆಂಡರ್‌ ಪ್ರಕ್ರಿಯೆಯಲ್ಲಿ ನಿರ್ದಿಷ್ಟ ತಂತ್ರಜ್ಞಾನ ಒದಗಿಸುವ ಸಂಸ್ಥೆಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಬಂಧಿತ ತಾಂತ್ರಿಕ ಮಾನದಂಡಗಳು ಮತ್ತು ಷರತ್ತುಗಳನ್ನು ವಿಧಿಸಲಾಗಿತ್ತು ಎಂಬ ಆರೋಪ ಬೆಳಕಿಗೆ ಬಂದಿದೆ. ಇದರಿಂದ ಸ್ಪರ್ಧೆ ಸೀಮಿತಗೊಂಡು ಆಯ್ದ ಖಾಸಗಿ ಸಂಸ್ಥೆಗೆ ಅನಧಿಕೃತ ಲಾಭ ದೊರಕುವಂತೆ ಮಾಡಲಾಗಿದೆ ಎಂದು ಎಸಿಬಿ ಆರೋಪಿಸಿದೆ.

ಇದಲ್ಲದೆ, ಟೆಂಡರ್‌ ಪ್ರಕ್ರಿಯೆಯನ್ನು ಪ್ರಭಾವಿತಗೊಳಿಸುವ ಉದ್ದೇಶದಿಂದ ಕೆಲವು ಖಾಸಗಿ ವ್ಯಕ್ತಿಗಳು ಸರ್ಕಾರಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂಬುದೂ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಎಸಿಬಿ ತಿಳಿಸಿದೆ.

ನಿರ್ದಿಷ್ಟ ತಂತ್ರಜ್ಞಾನ ಒದಗಿಸುವ ಸಂಸ್ಥೆಯ ಪರವಾಗಿ ಟೆಂಡರ್‌ ಷರತ್ತುಗಳನ್ನು ರೂಪಿಸಲು ಖಾಸಗಿ ವ್ಯಕ್ತಿಗಳು ಮತ್ತು ಸರ್ಕಾರಿ ಅಧಿಕಾರಿಗಳ ನಡುವೆ ಸಂಚು ನಡೆದಿರುವ ಸಾಧ್ಯತೆಯನ್ನು ಈ ಸಂಪರ್ಕಗಳು ಸೂಚಿಸುತ್ತವೆ ಎಂದು ತನಿಖಾ ಸಂಸ್ಥೆ ಹೇಳಿದೆ.

ಪ್ರಕರಣದಲ್ಲಿ ಹಣದ ವಹಿವಾಟಿನ ಸಂಪೂರ್ಣ ಮಾರ್ಗ ಹಾಗೂ ಅಕ್ರಮವಾಗಿ ಗಳಿಸಲಾಗಿದೆ ಎನ್ನಲಾದ ಹಣದ ಮೂಲದ ಬಗ್ಗೆಯೂ ತನಿಖೆ ಮುಂದುವರಿದಿದೆ ಎಂದು ಎಸಿಬಿ ತಿಳಿಸಿದೆ.

Share This Article