ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಭಾರತ–ಜಪಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುತ್ತಿದ್ದು, ಭಾರತದಲ್ಲಿ ಹೂಡಿಕೆ ಮತ್ತು ಸಹಭಾಗಿತ್ವವನ್ನು ವಿಸ್ತರಿಸುವಂತೆ ಜಪಾನ್ನ ಉದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ.
ನವದೆಹಲಿಯಲ್ಲಿ ಜಪಾನ್ನ ಉದ್ಯಮಿಗಳ ನಿಯೋಗವನ್ನು ಉದ್ದೇಶಿಸಿ ಮಾತನಾಡಿದ ಪಿಯೂಷ್ ಗೋಯಲ್, ಭಾರತ ಮತ್ತು ಜಪಾನ್ ಶಾಂತಿ, ಪ್ರಗತಿ ಹಾಗೂ ಸಮೃದ್ಧಿಯ ಸಾಮಾನ್ಯ ಆಶಯಗಳನ್ನು ಆಧರಿಸಿದ ದೀರ್ಘಕಾಲೀನ ಮತ್ತು ನಿಕಟ ಸಂಬಂಧವನ್ನು ಹೊಂದಿವೆ ಎಂದು ಹೇಳಿದರು. ಯಮನಾಶಿ ಪ್ರಿಫೆಕ್ಚರ್ನಿಂದ ಆಗಮಿಸಿರುವ ನಿಯೋಗದ ಭೇಟಿ, ಭಾರತದಲ್ಲಿನ ವಿವಿಧ ರಾಜ್ಯಗಳು ಮತ್ತು ಪ್ರದೇಶಗಳಿಗೂ ದ್ವಿಪಕ್ಷೀಯ ಸಹಭಾಗಿತ್ವ ವಿಸ್ತರಿಸುತ್ತಿರುವುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
2025–26ನೇ ಹಣಕಾಸು ವರ್ಷದಲ್ಲಿ ಭಾರತ–ಜಪಾನ್ ನಡುವಿನ ದ್ವಿಪಕ್ಷೀಯ ವ್ಯಾಪಾರವು 2750 ಕೋಟಿ ಡಾಲರ್ ತಲುಪಿದೆ ಎಂದು ಸಚಿವರು ತಿಳಿಸಿದರು. ಅಲ್ಲದೆ, ಭಾರತಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆ (FDI) ಮಾಡುವ ದೇಶಗಳ ಪೈಕಿ ಜಪಾನ್ ಈಗ ಐದನೇ ಅತಿದೊಡ್ಡ ಮೂಲವಾಗಿದೆ ಎಂದು ಅವರು ಹೇಳಿದರು.
ಭಾರತ–ಜಪಾನ್ ಸಹಭಾಗಿತ್ವದ ಪರಿಣಾಮಗಳು ದೇಶದ ವಿವಿಧ ಭಾಗಗಳಲ್ಲಿ ಈಗಾಗಲೇ ಗೋಚರಿಸುತ್ತಿವೆ ಎಂದು ಪಿಯೂಷ್ ಗೋಯಲ್ ತಿಳಿಸಿದರು. ಮುಂಬೈ–ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆ, ದೆಹಲಿ, ಅಹಮದಾಬಾದ್, ಬೆಂಗಳೂರು ಮತ್ತು ಚೆನ್ನೈ ನಗರಗಳ ಜಪಾನ್ ಸಹಯೋಗದ ಮೆಟ್ರೋ ಯೋಜನೆಗಳು ಹಾಗೂ ಎಂಟು ರಾಜ್ಯಗಳಲ್ಲಿ ಸ್ಥಾಪಿಸಲಾಗಿರುವ 11 ಜಪಾನೀಸ್ ಕೈಗಾರಿಕಾ ಟೌನ್ಶಿಪ್ಗಳು ಇದಕ್ಕೆ ಪ್ರಮುಖ ಉದಾಹರಣೆಗಳಾಗಿವೆ.
ಭಾರತದಲ್ಲಿ ಹೂಡಿಕೆಗೆ ಇರುವ ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ಜಪಾನ್ನ ಉದ್ಯಮಗಳು ತಮ್ಮ ವ್ಯವಹಾರ ಮತ್ತು ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸಬಹುದು ಎಂದು ಸಚಿವರು ಅಭಿಪ್ರಾಯಪಟ್ಟರು.


