ಏಷ್ಯನ್ ಓಪನ್ ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್ ಟ್ರೋಫಿಗೆ ಚಾಲನೆ: ಅಂತರರಾಷ್ಟ್ರೀಯ ಕ್ರೀಡಾ ತಾಣವಾಗಿ ಉತ್ತರಾಖಂಡ

2 Min Read
2 Min Read

ಡೆಹ್ರಾಡೂನ್: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು 2026ರ ಏಷ್ಯನ್ ಓಪನ್ ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್ ಟ್ರೋಫಿ ಸ್ಪರ್ಧೆಗೆ ಡೆಹ್ರಾಡೂನ್‌ನಲ್ಲಿ ನಿನ್ನೆ ಚಾಲನೆ ನೀಡಿದರು. ಗುರುವಾರದವರೆಗೆ ನಡೆಯಲಿರುವ ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಏಷ್ಯಾದ 14 ದೇಶಗಳ ಒಟ್ಟು 272 ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ಇವರಲ್ಲಿ 130 ಮಂದಿ ಭಾರತೀಯ ಆಟಗಾರರಾಗಿದ್ದಾರೆ.

ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಧಾಮಿ, ಏಷ್ಯನ್ ಓಪನ್ ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್‌ನಂತಹ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸುವ ಅವಕಾಶ ದೊರೆತಿರುವುದು ಉತ್ತರಾಖಂಡಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು. ಈ ಕ್ರೀಡಾಕೂಟವು ಚಳಿಗಾಲದ ಹಾಗೂ ಹಿಮ ಕ್ರೀಡೆಗಳಿಗೆ ಅಂತಾರಾಷ್ಟ್ರೀಯ ತಾಣವಾಗಿ ಉತ್ತರಾಖಂಡದ ಗುರುತನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದರು.

ಕ್ರೀಡಾ ಸಂಸ್ಕೃತಿಯಲ್ಲಿ ಮಹತ್ವದ ಬದಲಾವಣೆ

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಕ್ರೀಡಾ ಸಂಸ್ಕೃತಿಯಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ ಎಂದು ಧಾಮಿ ಹೇಳಿದರು. ‘ಖೇಲೋ ಇಂಡಿಯಾ’ ಮತ್ತು ‘ಫಿಟ್ ಇಂಡಿಯಾ’ ಅಭಿಯಾನಗಳಂತಹ ಉಪಕ್ರಮಗಳು ದೇಶಾದ್ಯಂತ ಕ್ರೀಡಾ ಸಂಸ್ಕೃತಿಯನ್ನು ಬಲಪಡಿಸಿವೆ ಎಂದರು.

ಭಾರತೀಯ ಕ್ರೀಡಾಪಟುಗಳು ಇದೀಗ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದು, ದೇಶಕ್ಕೆ ಕೀರ್ತಿ ತರುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು

ಉತ್ತರಾಖಂಡವನ್ನು ದೇಶದ ಪ್ರಮುಖ ಕ್ರೀಡಾ ರಾಜ್ಯವನ್ನಾಗಿ ರೂಪಿಸಲು ರಾಜ್ಯ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಧಾಮಿ ತಿಳಿಸಿದರು. ಕಳೆದ ವರ್ಷ ನಡೆದ 38ನೇ ರಾಷ್ಟ್ರೀಯ ಕ್ರೀಡಾಕೂಟದ ಯಶಸ್ವಿ ಆಯೋಜನೆಯು ರಾಜ್ಯದಲ್ಲಿ ಆಧುನಿಕ ಹಾಗೂ ವಿಶ್ವಮಟ್ಟದ ಕ್ರೀಡಾ ಮೂಲಸೌಕರ್ಯ ನಿರ್ಮಾಣಕ್ಕೆ ಬಲವಾದ ಅಡಿಪಾಯ ಹಾಕಿದೆ ಎಂದರು.

ಇದರಿಂದಾಗಿ ಉತ್ತರಾಖಂಡವು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು.

8 ನಗರಗಳಲ್ಲಿ 23 ಕ್ರೀಡಾ ಅಕಾಡೆಮಿಗಳ ಸ್ಥಾಪನೆ

ರಾಜ್ಯದಲ್ಲಿ ಕ್ರೀಡಾ ಪರಂಪರೆ ಯೋಜನೆ (Sports Legacy Plan) ಜಾರಿಗೊಳಿಸುವ ಕಾರ್ಯ ವೇಗವಾಗಿ ಸಾಗುತ್ತಿದೆ. ಈ ಯೋಜನೆಯಡಿ ಎಂಟು ಪ್ರಮುಖ ನಗರಗಳಲ್ಲಿ 23 ಕ್ರೀಡಾ ಅಕಾಡೆಮಿಗಳನ್ನು ಸ್ಥಾಪಿಸಲಾಗುತ್ತಿದ್ದು, ಕ್ರೀಡಾಪಟುಗಳಿಗೆ ಉನ್ನತ ಮಟ್ಟದ ತರಬೇತಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಹಲ್ದ್ವಾನಿಯಲ್ಲಿ ರಾಜ್ಯದ ಮೊದಲ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸುವ ಕಾರ್ಯವೂ ವೇಗವಾಗಿ ನಡೆಯುತ್ತಿದೆ. ಮತ್ತೊಂದೆಡೆ, ಲೋಹಾಘಾಟ್‌ನ ಮಹಿಳಾ ಕ್ರೀಡಾ ಕಾಲೇಜು ಈಗಾಗಲೇ ಕಾರ್ಯಾರಂಭ ಮಾಡಿದೆ.

ಜಲ, ಸಾಹಸ ಮತ್ತು ಚಳಿಗಾಲದ ಕ್ರೀಡೆಗಳಿಗೂ ಉತ್ತೇಜನ

ಸಾಂಪ್ರದಾಯಿಕ ಕ್ರೀಡೆಗಳ ಜತೆಗೆ ಜಲ ಕ್ರೀಡೆ, ಸಾಹಸ ಕ್ರೀಡೆ, ಚಳಿಗಾಲದ ಕ್ರೀಡೆ ಮತ್ತು ಹಿಮ ಕ್ರೀಡೆಗಳಿಗೂ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದು ಧಾಮಿ ಹೇಳಿದರು.

ದೇಶದ ವಿವಿಧ ಭಾಗಗಳ ಕ್ರೀಡಾಪಟುಗಳಷ್ಟೇ ಅಲ್ಲದೆ, ವಿಶ್ವದ ವಿವಿಧ ದೇಶಗಳ ಆಟಗಾರರೂ ತರಬೇತಿಗಾಗಿ ಆಗಮಿಸುವಂತಹ ಪ್ರಮುಖ ಕ್ರೀಡಾ ತರಬೇತಿ ತಾಣವಾಗಿ ಉತ್ತರಾಖಂಡವನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಗುರಿಯಾಗಿದೆ ಎಂದು ಅವರು ತಿಳಿಸಿದರು.

Share This Article