ಮಾಜಿ ಅಗ್ನಿವೀರರಿಗೆ ಸರ್ಕಾರಿ ಉದ್ಯೋಗದ ಅವಕಾಶ ಹೆಚ್ಚಳ: ದೆಹಲಿ ಸರ್ಕಾರದಿಂದ ಶೇ.20 ಮೀಸಲಾತಿ

1 Min Read
1 Min Read

ನವದೆಹಲಿ: ಮಾಜಿ ಅಗ್ನಿವೀರರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ದೆಹಲಿ ಅಗ್ನಿಶಾಮಕ ಸೇವೆ ಮತ್ತು ಕಾರಾಗೃಹ ಇಲಾಖೆಯ ನೇರ ನೇಮಕಾತಿಯಲ್ಲಿ ಮಾಜಿ ಅಗ್ನಿವೀರರಿಗೆ ಶೇ.20ರಷ್ಟು ಅಡ್ಡ (ಹಾರಿಜಾಂಟಲ್) ಮೀಸಲಾತಿ ನೀಡಲು ಸರ್ಕಾರ ಅನುಮೋದನೆ ನೀಡಿದೆ.

ದೆಹಲಿ ಅಗ್ನಿಶಾಮಕ ಸೇವೆಯ ಫೈರ್ ಆಪರೇಟರ್ ಹುದ್ದೆಗಳು ಹಾಗೂ ಕಾರಾಗೃಹ ಇಲಾಖೆಯ ವಾರ್ಡರ್ ಮತ್ತು ಮ್ಯಾಟ್ರನ್ ಹುದ್ದೆಗಳ ನೇರ ನೇಮಕಾತಿಯಲ್ಲಿ ಈ ಮೀಸಲಾತಿ ಅನ್ವಯವಾಗಲಿದೆ.

ಗೃಹ ಇಲಾಖೆಯ ಆದೇಶದ ಪ್ರಕಾರ, ಅರ್ಹ ಮಾಜಿ ಅಗ್ನಿವೀರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನೂ ನೀಡಲಾಗುತ್ತದೆ. ಅಗ್ನಿವೀರ ಯೋಜನೆಯಡಿ ಸೇವೆ ಪೂರ್ಣಗೊಳಿಸಿದವರಿಗೆ ಉದ್ಯೋಗ ಮತ್ತು ಪುನರ್ವಸತಿ ಅವಕಾಶಗಳನ್ನು ಕಲ್ಪಿಸುವ ಕೇಂದ್ರ ಸರ್ಕಾರದ ನೀತಿಗೆ ಈ ನಿರ್ಧಾರ ಅನುಗುಣವಾಗಿದೆ.

ಕೇಂದ್ರ ಸರ್ಕಾರದಿಂದಲೂ ಮೀಸಲಾತಿ

ಮಾಜಿ ಅಗ್ನಿವೀರರ ಪುನರ್ವಸತಿಗೆ ಕೇಂದ್ರ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಗೃಹ ಸಚಿವಾಲಯವು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPFs) ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ) ಹಾಗೂ ರೈಫಲ್‌ಮ್ಯಾನ್ ಹುದ್ದೆಗಳ ಶೇ.50ರಷ್ಟು ಸ್ಥಾನಗಳನ್ನು ಮಾಜಿ ಅಗ್ನಿವೀರರಿಗೆ ಮೀಸಲಿಟ್ಟಿದೆ.

ದೆಹಲಿ ಸರ್ಕಾರದ ಹೊಸ ನಿರ್ಧಾರದಿಂದ ಅಗ್ನಿವೀರರಾಗಿ ಸೇವೆ ಸಲ್ಲಿಸಿದವರಿಗೆ ರಾಜ್ಯದ ಅಗ್ನಿಶಾಮಕ ಮತ್ತು ಕಾರಾಗೃಹ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಮತ್ತಷ್ಟು ಅವಕಾಶಗಳು ದೊರೆಯಲಿವೆ.

Share This Article