ಭಾರತ–ಲೈಬೀರಿಯಾ ಬಾಂಧವ್ಯಕ್ಕೆ ಮತ್ತಷ್ಟು ಬಲ: ಜೈಶಂಕರ್, ಸಾರಾ ನ್ಯಾಂತಿ ದ್ವಿಪಕ್ಷೀಯ ಮಾತುಕತೆ

1 Min Read
1 Min Read

ನವದೆಹಲಿ: ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಹಾಗೂ ಲೈಬೀರಿಯಾ ವಿದೇಶಾಂಗ ಸಚಿವೆ ಸಾರಾ ಬೆೈಸೊಲೋ ನ್ಯಾಂತಿ ಅವರು ನವದೆಹಲಿಯಲ್ಲಿ ನಿನ್ನೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಭಾರತ–ಲೈಬೀರಿಯಾ ನಡುವಿನ ವಿವಿಧ ಕ್ಷೇತ್ರಗಳ ಸಹಕಾರದ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.

ತಂತ್ರಜ್ಞಾನ, ಕೃಷಿ, ಆರೋಗ್ಯ, ಗಣಿಗಾರಿಕೆ, ಇಂಧನ, ವ್ಯಾಪಾರ ಮತ್ತು ಹೂಡಿಕೆ, ಶಿಕ್ಷಣ, ಸಾಮರ್ಥ್ಯ ವೃದ್ಧಿ ಹಾಗೂ ಜನರ ನಡುವಿನ ಸಂಪರ್ಕ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಉಭಯ ಸಚಿವರು ಪರಿಶೀಲಿಸಿದರು.

ಇದೇ ವೇಳೆ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಹಾಗೂ ಬಹುಪಕ್ಷೀಯ ವಿಚಾರಗಳ ಬಗ್ಗೆಯೂ ಇಬ್ಬರು ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಂಡರು.

ನವದೆಹಲಿಯಲ್ಲಿ ಲೈಬೀರಿಯಾ ರಾಯಭಾರ ಕಚೇರಿಯ ಉದ್ಘಾಟನೆ ಹಾಗೂ ಕಾರ್ಯಾರಂಭಕ್ಕೆ ವಿದೇಶಾಂಗ ಸಚಿವೆ ಸಾರಾ ನ್ಯಾಂತಿ ಅವರನ್ನು ಡಾ. ಎಸ್. ಜೈಶಂಕರ್ ಅಭಿನಂದಿಸಿದರು.

ಶಾಂತಿ, ಅಭಿವೃದ್ಧಿ ಹಾಗೂ ಜಾಗತಿಕ ದಕ್ಷಿಣದ ರಾಷ್ಟ್ರಗಳ ಧ್ವನಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಬಗ್ಗೆಯೂ ಉಭಯ ಸಚಿವರು ಚರ್ಚಿಸಿದರು.

ವಿಶ್ವದ ಬದಲಾಗುತ್ತಿರುವ ಸನ್ನಿವೇಶಕ್ಕೆ ಅನುಗುಣವಾಗಿ ಬಹುಪಕ್ಷೀಯ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯವಿದೆ ಎಂದು ಒತ್ತಿಹೇಳಿದ ಅವರು, ಸುಧಾರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಬಹುಪಕ್ಷೀಯ ಸಂಸ್ಥೆಗಳಲ್ಲಿ ಸುಧಾರಣೆಯ ಮಹತ್ವದ ಕುರಿತು ಚರ್ಚಿಸಿದರು.

Share This Article