‘ರಾಜಕೀಯ ಅಧಿಕಾರಕ್ಕಾಗಿ ಅಲ್ಲ, ದೇಶಸೇವೆಗಾಗಿ’ – ರಾಮನಾಥ್ ಕೋವಿಂದ್ ಆತ್ಮಕಥೆ ಬಿಡುಗಡೆ

2 Min Read
2 Min Read

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಆತ್ಮಕಥೆ ‘Triumph of the Indian Republic: My Life, My Struggles’ ಅನ್ನು ಇಂದು ನವದೆಹಲಿಯಲ್ಲಿ ಬಿಡುಗಡೆ ಮಾಡಿದರು.

ಈ ಕೃತಿಯಲ್ಲಿ ರಾಮನಾಥ್ ಕೋವಿಂದ್ ಅವರ ಬಾಲ್ಯದಿಂದ ಆರಂಭಿಸಿ, ಅವರು ಎದುರಿಸಿದ ಹೋರಾಟಗಳು, ಸಾಧನೆಗಳು ಹಾಗೂ ಸಾರ್ವಜನಿಕ ಜೀವನದ ಮಹತ್ವದ ಘಟ್ಟಗಳ ಮೂಲಕ ಭಾರತದ 14ನೇ ರಾಷ್ಟ್ರಪತಿಯಾಗಿ ಸಲ್ಲಿಸಿದ ಸೇವೆಯವರೆಗಿನ ಜೀವನ ಪಯಣವನ್ನು ವಿವರಿಸಲಾಗಿದೆ.

“ಕೋವಿಂದ್ ಅವರ ಮಾರ್ಗದರ್ಶನ ನನಗೆ ಶಕ್ತಿಯಾಗಿದೆ”

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಷ್ಟ್ರಪತಿಯಾಗಿದ್ದ ಅವಧಿಯಲ್ಲಿ ರಾಮನಾಥ್ ಕೋವಿಂದ್ ನೀಡಿದ ಮಾರ್ಗದರ್ಶನ ತಮ್ಮ ಪಾಲಿಗೆ ದೊಡ್ಡ ಶಕ್ತಿಯಾಗಿತ್ತು ಎಂದು ಹೇಳಿದರು.

ಆತ್ಮಕಥೆಯು ಕೋವಿಂದ್ ಅವರ ಜೀವನ, ವ್ಯಕ್ತಿತ್ವ ಮತ್ತು ದೇಶಕ್ಕೆ ನೀಡಿದ ಕೊಡುಗೆಗಳ ಕುರಿತು ಒಳನೋಟ ನೀಡುವುದರ ಜೊತೆಗೆ, ಭಾರತೀಯ ಪ್ರಜಾಪ್ರಭುತ್ವ ಮತ್ತು ಸಮಾಜಕ್ಕೆ ಅವರ ಪ್ರಮುಖ ಪರಂಪರೆಯಾಗಿ ಉಳಿಯಲಿದೆ ಎಂದು ಪ್ರಧಾನಿ ಹೇಳಿದರು.

ರಾಷ್ಟ್ರದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಿಂದ ನಿವೃತ್ತರಾದ ಬಳಿಕವೂ ಕೋವಿಂದ್ ಅವರು ಸಕ್ರಿಯವಾಗಿ ಸಾರ್ವಜನಿಕ ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ದೇಶ, ಒಂದು ಚುನಾವಣೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಅವರು ತಮ್ಮ ಕೊಡುಗೆ ಮುಂದುವರಿಸಿದ್ದಾರೆ ಎಂದು ಮೋದಿ ತಿಳಿಸಿದರು.

ಯುವಜನರು ಕೋವಿಂದ್ ಅವರ ಜೀವನ ತಿಳಿಯಬೇಕು

ರಾಮನಾಥ್ ಕೋವಿಂದ್ ಅವರ ಜೀವನ ಪಯಣವನ್ನು ಅವರದೇ ಮಾತುಗಳಲ್ಲಿ ತಿಳಿದುಕೊಳ್ಳಲು ಯುವಜನರು ಈ ಆತ್ಮಕಥೆಯನ್ನು ಓದಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಸೇರಿದಂತೆ ಹಲವು ಮಹನೀಯರು ಬಡವರು ಹಾಗೂ ಹಿಂದುಳಿದವರಿಗೂ ದೇಶದ ಅತ್ಯುನ್ನತ ಸ್ಥಾನಗಳನ್ನು ತಲುಪುವ ಅವಕಾಶವಿರುವ ಭಾರತವನ್ನು ನಿರ್ಮಿಸುವ ಕನಸು ಕಂಡಿದ್ದರು ಎಂದು ಮೋದಿ ಹೇಳಿದರು.

ರಾಮನಾಥ್ ಕೋವಿಂದ್ ಅವರಂತಹವರು ತಮ್ಮ ಪರಿಶ್ರಮ ಮತ್ತು ಸಾಮರ್ಥ್ಯದ ಮೂಲಕ ಜೀವನವನ್ನು ರೂಪಿಸಿಕೊಂಡಷ್ಟೇ ಅಲ್ಲದೆ, ಆ ಮಹನೀಯರ ಶತಮಾನಗಳ ಹಿಂದಿನ ಕನಸುಗಳು ಮತ್ತು ಆಶಯಗಳನ್ನು ಸಾಕಾರಗೊಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.

“ರಾಜಕೀಯ ಅಧಿಕಾರ ಪಡೆಯುವ ಸಾಧನವಲ್ಲ, ದೇಶಸೇವೆಯ ಸಾಧನ”

ಸಮಾರಂಭದಲ್ಲಿ ಮಾತನಾಡಿದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ರಾಜಕೀಯವೆಂದರೆ ಕೇವಲ ಅಧಿಕಾರ ಪಡೆಯುವ ಮಾರ್ಗವಲ್ಲ; ಅದು ದೇಶದ ಸೇವೆ ಮಾಡುವ ಸಾಧನ ಎಂದು ಹೇಳಿದರು.

ಶಿಕ್ಷಣವು ಜೀವನದಲ್ಲಿ ಅಸಂಖ್ಯಾತ ಸಾಧ್ಯತೆಗಳ ಬಾಗಿಲು ತೆರೆಯುವುದರ ಜೊತೆಗೆ, ಹೊಸ ದಿಕ್ಕುಗಳು ಮತ್ತು ಅನೇಕ ಅವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಇಂದು ಕೋಟ್ಯಂತರ ಜನರಿಗೆ ಸ್ವಂತ ಸೂರು ಒದಗಿಸಲಾಗಿದೆ ಎಂದು ಕೋವಿಂದ್ ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.

Share This Article