ನವದೆಹಲಿ: ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರು ಇಂದು ನಾಲ್ಕು ದಿನಗಳ ಅಧಿಕೃತ ಭೇಟಿಗಾಗಿ ಮಾರಿಷಸ್‌ಗೆ ತೆರಳಿದ್ದಾರೆ. ಭಾರತ ಮತ್ತು ಮಾರಿಷಸ್ ನಡುವಿನ ದ್ವಿಪಕ್ಷೀಯ ಸಾಗರ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಹಾಗೂ ರಕ್ಷಣಾ ಸಂಬಂಧಗಳನ್ನು ಆಳಗೊಳಿಸುವ ಉದ್ದೇಶದಿಂದ ಈ ಭೇಟಿ ನಡೆಯುತ್ತಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಭೇಟಿಯ ಸಂದರ್ಭದಲ್ಲಿ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರು ಮಾರಿಷಸ್ ಸರ್ಕಾರದ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಉಭಯ ದೇಶಗಳ ಪರಸ್ಪರ ಹಿತಾಸಕ್ತಿಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳು ಚರ್ಚೆಯಾಗಲಿವೆ.
ಮುಖ್ಯವಾಗಿ ಸಾಗರ ಭದ್ರತೆ, ರಕ್ಷಣಾ ಸಹಕಾರ, ಸಾಮರ್ಥ್ಯ ವೃದ್ಧಿ ಹಾಗೂ ಸೇನಾ ಸಹಯೋಗ ಸೇರಿದಂತೆ ವಿವಿಧ ಕ್ಷೇತ್ರಗಳ ಕುರಿತು ಮಾತುಕತೆ ನಡೆಯುವ ನಿರೀಕ್ಷೆಯಿದೆ.
ಭಾರತ ಮತ್ತು ಮಾರಿಷಸ್ ನಡುವಿನ ದೀರ್ಘಕಾಲದ ಸ್ನೇಹ ಸಂಬಂಧದ ಹಿನ್ನೆಲೆಯಲ್ಲಿ ನೌಕಾಪಡೆ ಮುಖ್ಯಸ್ಥರ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಸಾಗರ ಭದ್ರತೆ ಸೇರಿದಂತೆ ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಈ ಭೇಟಿಯು ನೆರವಾಗಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.


