ನವದೆಹಲಿ: ಭಾರತವು ಪಳೆಯುಳಿಕೆ ಇಂಧನ ಆಧಾರಿತವಲ್ಲದ ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ಮಹತ್ವದ ಸಾಧನೆ ಮಾಡಿದ್ದು, ಒಟ್ಟು ಸ್ಥಾಪಿತ ಸಾಮರ್ಥ್ಯ 300 ಗಿಗಾವ್ಯಾಟ್‌ಗಳನ್ನು ದಾಟಿದೆ.
ಈ ಸಾಧನೆಯು 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆ ಇಂಧನ ಮುಕ್ತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸಾಧಿಸುವ ಭಾರತದ ಗುರಿಯ ಶೇ.60ಕ್ಕೂ ಹೆಚ್ಚಿನ ಭಾಗವನ್ನು ಈಗಾಗಲೇ ತಲುಪಿರುವುದನ್ನು ಸೂಚಿಸುತ್ತದೆ ಎಂದು ಆಕಾಶವಾಣಿ ವರದಿ ಮಾಡಿದೆ.
ನವೀಕರಿಸಬಹುದಾದ ಇಂಧನ ಸಚಿವಾಲಯದ ಪ್ರಕಾರ, ದೇಶದ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ಪಳೆಯುಳಿಕೆ ಇಂಧನವಲ್ಲದ ಮೂಲಗಳ ಪಾಲು ಇದೀಗ ಶೇ.54ಕ್ಕೂ ಹೆಚ್ಚಾಗಿದೆ. ವಿವಿಧ ಸ್ವಚ್ಛ ಇಂಧನ ಕ್ಷೇತ್ರಗಳಲ್ಲಿನ ಗಮನಾರ್ಹ ಬೆಳವಣಿಗೆಯೇ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ.
ಸೌರಶಕ್ತಿ ಪ್ರಮುಖ ಚಾಲಕ
ದೇಶದ ಒಟ್ಟು ಪಳೆಯುಳಿಕೆ ಇಂಧನವಲ್ಲದ ವಿದ್ಯುತ್ ಸಾಮರ್ಥ್ಯದಲ್ಲಿ ಸೌರಶಕ್ತಿ ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರಸ್ತುತ ದೇಶದಲ್ಲಿ ಸುಮಾರು 165 ಗಿಗಾವ್ಯಾಟ್ ಸೌರ ವಿದ್ಯುತ್ ಸ್ಥಾಪಿತ ಸಾಮರ್ಥ್ಯವಿದೆ.
2025-26ನೇ ಸಾಲಿನಲ್ಲಿ ಭಾರತವು ಒಂದೇ ವರ್ಷದಲ್ಲಿ ದಾಖಲೆಯ 55.29 ಗಿಗಾವಾಟ್ ಪಳೆಯುಳಿಕೆ ಇಂಧನವಲ್ಲದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸೇರ್ಪಡೆಗೊಳಿಸಿದೆ ಎಂದು ಸಚಿವಾಲಯ ತಿಳಿಸಿದೆ.
ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿಯೂ ದೇಶ ಗಮನಾರ್ಹ ಪ್ರಗತಿ ಸಾಧಿಸಿದೆ. 2014-15ರಲ್ಲಿ ಸುಮಾರು 191 ಬಿಲಿಯನ್ ಯೂನಿಟ್‌ಗಳಷ್ಟಿದ್ದ ನವೀಕರಿಸಬಹುದಾದ ಇಂಧನ ಉತ್ಪಾದನೆ, 2025-26ರಲ್ಲಿ 477 ಬಿಲಿಯನ್ ಯೂನಿಟ್‌ಗಳಿಗಿಂತ ಹೆಚ್ಚಾಗಿದೆ.
ಸ್ವಚ್ಛ ಇಂಧನದತ್ತ ಭಾರತದ ಪರಿವರ್ತನೆ ಕೇವಲ ಹವಾಮಾನ ಬದಲಾವಣೆಯ ಬದ್ಧತೆಗೆ ಸೀಮಿತವಾಗಿಲ್ಲ. ಇದು ದೇಶದ ಕೈಗಾರಿಕಾ ಸ್ಪರ್ಧಾತ್ಮಕತೆ, ಇಂಧನ ಸ್ವಾವಲಂಬನೆ ಹಾಗೂ ಆರ್ಥಿಕ ಸ್ಥಿರತೆಯನ್ನು ರೂಪಿಸುವ ಪ್ರಮುಖ ಅಂಶವಾಗಿ ಹೊರಹೊಮ್ಮಿದೆ ಎಂದು ನವೀಕರಿಸಬಹುದಾದ ಇಂಧನ ಸಚಿವಾಲಯ ತಿಳಿಸಿದೆ.


