ನವದೆಹಲಿ: ದೇಶದ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ದೆಹಲಿ ಮೆಟ್ರೋ ರೈಲು ನಿಗಮ (DMRC) ‘ಹರ್ ಘರ್ ತಿರಂಗಾ’ ಅಭಿಯಾನದ ಥೀಮ್ನೊಂದಿಗೆ ಸಿಂಗಾರಿಸಲಾದ ವಿಶೇಷ ಮೆಟ್ರೋ ರೈಲನ್ನು ಪರಿಚಯಿಸಿದೆ.
ಈ ವಿಶೇಷ ರೈಲು ದೆಹಲಿ ಮೆಟ್ರೋದ ಯೆಲ್ಲೋ ಲೈನ್ನಲ್ಲಿ ಸಂಚರಿಸಲಿದ್ದು, ಸ್ವಾತಂತ್ರ್ಯದ 80ನೇ ವರ್ಷದ ಸಂಭ್ರಮದ ಅಂಗವಾಗಿ ಆಯೋಜಿಸಿರುವ ವಾರದ ಅವಧಿಯ ವಿವಿಧ ಕಾರ್ಯಕ್ರಮಗಳ ಭಾಗವಾಗಿ ಇದನ್ನು ಪರಿಚಯಿಸಲಾಗಿದೆ ಎಂದು ಡಿಎಂಆರ್ಸಿ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ತಿಳಿಸಿದೆ.
ಈ ವರ್ಷದ ‘ಹರ್ ಘರ್ ತಿರಂಗಾ’ ಅಭಿಯಾನವು ಭಾರತದ ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ ರಚನೆಯ 150ನೇ ವರ್ಷಾಚರಣೆಯ ಮಹತ್ವದ ಸಂದರ್ಭಕ್ಕೂ ವಿಶೇಷ ಒತ್ತು ನೀಡುತ್ತಿದೆ ಎಂದು ಡಿಎಂಆರ್ಸಿ ತಿಳಿಸಿದೆ.
ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಹಾರಿಸುವ ಮೂಲಕ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಡಿಎಂಆರ್ಸಿ ನಾಗರಿಕರಿಗೆ ಕರೆ ನೀಡಿದೆ. ಅಲ್ಲದೆ, ಅಭಿಯಾನದಡಿ ನಡೆಯಲಿರುವ ವಿವಿಧ ಡಿಜಿಟಲ್ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಸಾರ್ವಜನಿಕರನ್ನು ಪ್ರೋತ್ಸಾಹಿಸಿದೆ.
‘ಹರ್ ಘರ್ ತಿರಂಗಾ’ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ವಿಶೇಷ ಮೆಟ್ರೋ ರೈಲನ್ನು ವಿನ್ಯಾಸಗೊಳಿಸಲಾಗಿದ್ದು, ಸ್ವಾತಂತ್ರ್ಯೋತ್ಸವದ ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯ ಸಂದೇಶವನ್ನು ಸಾರಲಿದೆ.


