ನವದೆಹಲಿ: ರಾಷ್ಟ್ರಕವಿ, ಕವಿ ಸಾರ್ವಭೌಮ ರವೀಂದ್ರನಾಥ ಟ್ಯಾಗೋರ್ ಅವರ ಪುಣ್ಯತಿಥಿಯಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗೌರವ ನಮನ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಟ್ಯಾಗೋರ್ ಅವರನ್ನು ಸ್ಮರಿಸಿರುವ ಅಮಿತ್ ಶಾ, ತಮ್ಮ ಬರಹಗಳ ಮೂಲಕ ಟ್ಯಾಗೋರ್ ಅವರು ಭಾರತದ ಆತ್ಮಕ್ಕೆ ಧ್ವನಿ ನೀಡಿದರು ಹಾಗೂ ಸ್ವಾತಂತ್ರ್ಯ ಚಳವಳಿಯಲ್ಲಿ ಹೊಸ ಚೈತನ್ಯ ಮೂಡಿಸಿದರು ಎಂದು ಹೇಳಿದ್ದಾರೆ.
ಟ್ಯಾಗೋರ್ ಅವರ ಅಮರ ಕೃತಿ ‘ಜನಾ ಗಣ ಮನ’ ದೇಶದ ಏಕೀಕೃತ ಪ್ರಜ್ಞೆ ಮತ್ತು ಆತ್ಮಗೌರವದ ಸಂಕೇತವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಭಾರತೀಯ ಸಂಸ್ಕೃತಿ, ತತ್ವಶಾಸ್ತ್ರ ಮತ್ತು ಶಿಕ್ಷಣದ ಮಹತ್ವವನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುವಲ್ಲಿ ಟ್ಯಾಗೋರ್ ಅವರ ಕೊಡುಗೆ ಅಪಾರವಾಗಿದೆ. ವಿಶ್ವಭಾರತಿ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ಅವರು ಭಾರತದ ಜ್ಞಾನ ಮತ್ತು ಸಂಸ್ಕೃತಿಯ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿದರು ಎಂದು ಗೃಹ ಸಚಿವರು ಸ್ಮರಿಸಿದ್ದಾರೆ.
ಟ್ಯಾಗೋರ್ ಅವರ ಸಾಹಿತ್ಯ ಮತ್ತು ಚಿಂತನೆಗಳು ಇಂದಿಗೂ ಕೋಟ್ಯಂತರ ಭಾರತೀಯರಿಗೆ ನಿರಂತರ ಸ್ಫೂರ್ತಿಯ ಮೂಲವಾಗಿವೆ ಎಂದು ಅಮಿತ್ ಶಾ ಹೇಳಿದ್ದಾರೆ.


