ನವದೆಹಲಿ: ಕೈಯಾರೆ ಮಲ ತೆಗೆಯುವ ಪದ್ಧತಿ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ–2013ರ ಅಡಿಯಲ್ಲಿ 2024–25ರಲ್ಲಿ ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಯಾವುದೇ ಜಿಲ್ಲೆಯಲ್ಲಿ ಕೈಯಾರೆ ಮಲ ತೆಗೆಯುವ ಕಾರ್ಮಿಕರು ಪತ್ತೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರಾಜ್ಯಸಭೆಯಲ್ಲಿ ನಿನ್ನೆ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ವೀರೇಂದ್ರ ಕುಮಾರ್, 2013 ಮತ್ತು 2018ರಲ್ಲಿ ನಡೆದ ದೇಶವ್ಯಾಪಿ ಸಮೀಕ್ಷೆಗಳಲ್ಲಿ ಒಟ್ಟು 58,098 ಮಂದಿ ಕೈಯಾರೆ ಮಲ ತೆಗೆಯುವ ಕಾರ್ಮಿಕರನ್ನು ಗುರುತಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಗುರುತಿಸಲ್ಪಟ್ಟ ಎಲ್ಲರಿಗೂ ಸರ್ಕಾರದ ಪುನರ್ವಸತಿ ಕ್ರಮಗಳ ಭಾಗವಾಗಿ ತಲಾ ₹40 ಸಾವಿರ ಒನ್‌ಟೈಮ್ ನಗದು ನೆರವು ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಹಿಂದಿನ ಕೈಯಾರೆ ಮಲ ತೆಗೆಯುವ ಕಾರ್ಮಿಕರ ಪುನರ್ವಸತಿಗಾಗಿ ಸ್ವಯಂ ಉದ್ಯೋಗ ಯೋಜನೆಯನ್ನು ಇದೀಗ NAMASTE ಯೋಜನೆಯಲ್ಲಿ ವಿಲೀನಗೊಳಿಸಲಾಗಿದ್ದು, ಇದರ ಅಡಿಯಲ್ಲಿ ಸ್ಥಿರ ಹಾಗೂ ಪರ್ಯಾಯ ಜೀವನೋಪಾಯದ ಅವಕಾಶಗಳನ್ನು ಕಲ್ಪಿಸುವ ಪ್ರಯತ್ನ ಮುಂದುವರಿದಿದೆ ಎಂದು ವೀರೇಂದ್ರ ಕುಮಾರ್ ಹೇಳಿದರು.
2023–24ರಿಂದ 2025–26ರ ಅವಧಿಯಲ್ಲಿ ಒಟ್ಟು 5,632 ಮಂದಿ ಕೈಯಾರೆ ಮಲ ತೆಗೆಯುವ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗಿದೆ. ಇದೇ ಅವಧಿಯಲ್ಲಿ ಪರ್ಯಾಯ ಸ್ವಯಂ ಉದ್ಯೋಗ ಆರಂಭಿಸಲು 483 ಫಲಾನುಭವಿಗಳಿಗೆ ಬಂಡವಾಳ ಸಹಾಯಧನ ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸ್ವಚ್ಛತಾ ಕಾರ್ಮಿಕರ ಗೌರವ, ಸುರಕ್ಷತೆ ಮತ್ತು ಪುನರ್ವಸತಿಯನ್ನು ಖಚಿತಪಡಿಸುವುದು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಸಚಿವರು ಹೇಳಿದರು.
ಸ್ವಚ್ಛತಾ ಕಾರ್ಯಗಳನ್ನು ಯಾಂತ್ರೀಕರಣಗೊಳಿಸುವುದರ ಜೊತೆಗೆ, ದೇಶದಲ್ಲಿ ಕೈಯಾರೆ ಮಲ ತೆಗೆಯುವ ಪದ್ಧತಿಯನ್ನು ಎಲ್ಲ ರೂಪಗಳಲ್ಲೂ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯದಿಂದ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು.


