VB-G RAM G ಯೋಜನೆ: ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಬಾಕಿ ಪಾವತಿ ಇಲ್ಲ – ಕೇಂದ್ರ ಸರ್ಕಾರ

1 Min Read
1 Min Read

ನವದೆಹಲಿ: ವಿಕಸಿತ ಭಾರತ–ಉದ್ಯೋಗ ಮತ್ತು ಜೀವನೋಪಾಯ ಭರವಸೆ ಮಿಷನ್ (ಗ್ರಾಮೀಣ) [VB-G RAM G] ಯೋಜನೆಯಡಿ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ನೀಡಬೇಕಾದ ಅನುದಾನ ಬಾಕಿ ಉಳಿದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವ ಕಮಲೇಶ್ ಪಾಸ್ವಾನ್, ವಿಕಸಿತ ಭಾರತ–ಉದ್ಯೋಗ ಮತ್ತು ಜೀವನೋಪಾಯ ಭರವಸೆ (ಗ್ರಾಮೀಣ) ಕಾಯ್ದೆ–2025 ಈ ತಿಂಗಳ 1ರಿಂದ ದೇಶದ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಜಾರಿಗೆ ಬಂದಿದೆ ಎಂದು ತಿಳಿಸಿದರು.

ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು VB-G RAM G ಯೋಜನೆಯನ್ನು ಅಧಿಸೂಚನೆ ಹೊರಡಿಸಿ, ಅದರ ಅನುಷ್ಠಾನವನ್ನು ಆರಂಭಿಸಿವೆ ಎಂದು ಅವರು ಹೇಳಿದರು.

ಯೋಜನೆಯ ಅನುಷ್ಠಾನವನ್ನು ನಿರ್ವಹಣಾ ಮಾಹಿತಿ ವ್ಯವಸ್ಥೆ (Management Information System – MIS), ನಿಯಮಿತ ಪರಿಶೀಲನಾ ಸಭೆಗಳು ಹಾಗೂ ಇತರೆ ಮೇಲ್ವಿಚಾರಣಾ ವ್ಯವಸ್ಥೆಗಳ ಮೂಲಕ ಕೇಂದ್ರ ಸರ್ಕಾರ ನಿರಂತರವಾಗಿ ಪರಿಶೀಲಿಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

2026-27ನೇ ಹಣಕಾಸು ವರ್ಷಕ್ಕೆ ಈ ಯೋಜನೆಗಾಗಿ ₹95 ಸಾವಿರ ಕೋಟಿಗೂ ಅಧಿಕ ಅನುದಾನ ಮೀಸಲಿಡಲಾಗಿದೆ. ಇದು ದೇಶದ ಇತಿಹಾಸದಲ್ಲೇ ಯಾವುದೇ ಗ್ರಾಮೀಣ ಉದ್ಯೋಗ ಯೋಜನೆಗೆ ಬಜೆಟ್ ಅಂದಾಜು ಹಂತದಲ್ಲೇ ಮೀಸಲಾದ ಅತಿದೊಡ್ಡ ಅನುದಾನಗಳಲ್ಲಿ ಒಂದಾಗಿದೆ ಎಂದು ಕಮಲೇಶ್ ಪಾಸ್ವಾನ್ ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು, ಜೀವನೋಪಾಯವನ್ನು ಬಲಪಡಿಸುವುದು ಹಾಗೂ ಸಮಗ್ರ ಗ್ರಾಮೀಣ ಅಭಿವೃದ್ಧಿಗೆ ಉತ್ತೇಜನ ನೀಡುವುದು VB-G RAM G ಯೋಜನೆಯ ಪ್ರಮುಖ ಉದ್ದೇಶವಾಗಿದೆ.

Share This Article