ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಸೋರಾಂಜ್ (Sorange) ಪ್ರದೇಶದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಮೀಥೇನ್ ಅನಿಲ ಸ್ಫೋಟ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಸ್ಫೋಟ ಸಂಭವಿಸಿದ ವೇಳೆ ಗಣಿಯೊಳಗೆ 41 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಭಾರೀ ಸ್ಫೋಟದ ಪರಿಣಾಮ ಗಣಿಯ ದೊಡ್ಡ ಭಾಗ ಕುಸಿದು ಹಲವಾರು ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದರು.
ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (PDMA) ಮಾಹಿತಿಯನ್ನು ಉಲ್ಲೇಖಿಸಿರುವ ಸ್ಥಳೀಯ ಮಾಧ್ಯಮಗಳ ಪ್ರಕಾರ, ಅವಶೇಷಗಳಡಿ ಸಿಲುಕಿರುವ ಉಳಿದ ಕಾರ್ಮಿಕರನ್ನು ರಕ್ಷಿಸಲು ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.
ಗಣಿಗಳ ಮುಖ್ಯ ಪರಿಶೀಲಕ ಮುಹಮ್ಮದ್ ಆತಿಫ್ ಅವರ ಪ್ರಕಾರ, ಸುಮಾರು 4,000 ಅಡಿ ಆಳದಲ್ಲಿ ಮೀಥೇನ್ ಅನಿಲ ಸಂಗ್ರಹವಾಗಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಸ್ಫೋಟದ ಬಳಿಕ ಗಣಿಯೊಳಗೆ ಬೆಂಕಿ ಕಾಣಿಸಿಕೊಂಡು ಅಪಾಯಕಾರಿ ಅನಿಲಗಳು ಹರಡಿದ್ದವು ಎಂದು ಅವರು ತಿಳಿಸಿದ್ದಾರೆ.
ಬಲೂಚಿಸ್ತಾನದ ಕಲ್ಲಿದ್ದಲು ಗಣಿಗಳಲ್ಲಿ ಸಂಭವಿಸುವ ಬಹುತೇಕ ಸ್ಫೋಟಗಳಿಗೆ ಮೀಥೇನ್ ಅನಿಲದ ಸೋರಿಕೆಯೇ ಪ್ರಮುಖ ಕಾರಣ ಎಂದು ಮುಹಮ್ಮದ್ ಆತಿಫ್ ಹೇಳಿದ್ದಾರೆ.


