ನವದೆಹಲಿ: ದೇಶದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಬಲಪಡಿಸಿ ಯುವ ಪ್ರತಿಭೆಗಳನ್ನು ಉತ್ತೇಜಿಸುವ ಉದ್ದೇಶದಿಂದ 2026-27ರಿಂದ 2030-31ರವರೆಗೆ ಜಾರಿಯಾಗಲಿರುವ ವಿಸ್ತೃತ ‘ಖೇಲೋ ಇಂಡಿಯಾ’ ಯೋಜನೆ ಹಾಗೂ ರಾಷ್ಟ್ರೀಯ ಕ್ರೀಡಾ ಫೆಡರೇಷನ್ಗಳಿಗೆ (National Sports Federations – NSFs) ಹೆಚ್ಚುವರಿ ನೆರವು ನೀಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಎರಡೂ ಯೋಜನೆಗಳಿಗೆ ಒಟ್ಟಾರೆ ₹36,441 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.
ಈ ಕುರಿತು ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ಯುವಜನರ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಕ್ರೀಡೆಯ ಪಾತ್ರವನ್ನು ಮತ್ತಷ್ಟು ಬಲಪಡಿಸುವ ಸರ್ಕಾರದ ಬದ್ಧತೆಯನ್ನು ಈ ನಿರ್ಧಾರ ಪುನರುಚ್ಚರಿಸುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬ ಪ್ರತಿಭಾವಂತ ಯುವ ಕ್ರೀಡಾಪಟುವಿಗೂ ಶ್ರೇಷ್ಠ ಸಾಧನೆ ತಲುಪಲು ಸ್ಪಷ್ಟ ಮಾರ್ಗವನ್ನು ಈ ಯೋಜನೆ ಒದಗಿಸಲಿದೆ ಎಂದು ಅವರು ತಿಳಿಸಿದರು.
ಇದಲ್ಲದೆ, ಗ್ರಾಮೀಣ ಹಾಗೂ ತಳಮಟ್ಟದಿಂದ ಆರಂಭಿಸಿ ಟಾರ್ಗೆಟ್ ಪೊಡಿಯಂ ಒಲಿಂಪಿಕ್ ಸ್ಕೀಮ್ (TOPS) ಹಂತದವರೆಗೆ ದೇಶಾದ್ಯಂತ ಅತ್ಯಾಧುನಿಕ ತರಬೇತಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಈ ಯೋಜನೆ ನೆರವಾಗಲಿದೆ ಎಂದು ಸಚಿವರು ಹೇಳಿದರು.
ಕ್ರೀಡಾ ಪ್ರತಿಭೆಗಳನ್ನು ಗುರುತಿಸುವುದು, ವೈಜ್ಞಾನಿಕ ತರಬೇತಿ, ಆಧುನಿಕ ಕ್ರೀಡಾ ಮೂಲಸೌಕರ್ಯ ನಿರ್ಮಾಣ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾಧನೆಯನ್ನು ಹೆಚ್ಚಿಸುವುದು ಈ ವಿಸ್ತೃತ ಯೋಜನೆಯ ಪ್ರಮುಖ ಉದ್ದೇಶವಾಗಿದೆ.


