ನವದೆಹಲಿ: ದೆಹಲಿ ಸರ್ಕಾರವು ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕಾಗಿ ಕಡ್ಡಾಯಗೊಳಿಸಿರುವ ‘ಪಿಂಕ್ ಸಹೇಲಿ ಸ್ಮಾರ್ಟ್ ಕಾರ್ಡ್’ ಬಳಕೆಯ ಗಡುವನ್ನು ಆಗಸ್ಟ್ 16ರವರೆಗೆ ವಿಸ್ತರಿಸಿದೆ.
ಪರಿಷ್ಕೃತ ಆದೇಶದಂತೆ, ಆಗಸ್ಟ್ 15ರವರೆಗೆ ಬಸ್ ನಿರ್ವಾಹಕರು (ಕಂಡಕ್ಟರ್ಗಳು) ಮಹಿಳಾ ಪ್ರಯಾಣಿಕರಿಗೆ ಹಳೆಯ ಮಾದರಿಯ ಪಿಂಕ್ ಟಿಕೆಟ್ಗಳನ್ನು ನೀಡುವುದನ್ನು ಮುಂದುವರಿಸಲಿದ್ದಾರೆ.
ದೆಹಲಿ ಸಾರಿಗೆ ಸಚಿವ ಡಾ. ಪಂಕಜ್ ಕುಮಾರ್ ಸಿಂಗ್ ಈ ಕುರಿತು ಮಾಹಿತಿ ನೀಡಿ, ಸ್ಮಾರ್ಟ್ ಕಾರ್ಡ್ ವ್ಯವಸ್ಥೆಗೆ ಸುಗಮವಾಗಿ ಪರಿವರ್ತನೆ ಆಗುವಂತೆ ಹಾಗೂ ಅರ್ಹ ಮಹಿಳಾ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ, ಸಂಬಂಧಿತ ಅಧಿಕಾರಿಗಳು, ಡೆಪೋ ವ್ಯವಸ್ಥಾಪಕರು, ಪ್ರಾದೇಶಿಕ ವ್ಯವಸ್ಥಾಪಕರು ಹಾಗೂ ಕಂಡಕ್ಟರ್ಗಳು ಮಹಿಳೆಯರಲ್ಲಿ ಪಿಂಕ್ ಸಹೇಲಿ ಸ್ಮಾರ್ಟ್ ಕಾರ್ಡ್ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಹಾಗೂ ಗಡುವಿನೊಳಗೆ ಕಾರ್ಡ್ ಪಡೆಯಲು ಅಗತ್ಯ ಸಹಕಾರ ನೀಡಬೇಕು ಎಂದು ಸಚಿವರು ಸೂಚಿಸಿದ್ದಾರೆ.
ಆಗಸ್ಟ್ 15ರವರೆಗೆ ಈಗಿರುವ ವ್ಯವಸ್ಥೆಯಡಿ ಯಾವುದೇ ಮಹಿಳಾ ಪ್ರಯಾಣಿಕೆಗೆ ಉಚಿತ ಪ್ರಯಾಣ ನಿರಾಕರಿಸಬಾರದು ಎಂದು ಅಧಿಕಾರಿಗಳಿಗೆ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ದೆಹಲಿ ಸರ್ಕಾರದ ಮಾಹಿತಿಯಂತೆ, ಇಲ್ಲಿಯವರೆಗೆ 17,04,042 ಪಿಂಕ್ ಸಹೇಲಿ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸಲಾಗಿದ್ದು, ಮಹಿಳಾ ಪ್ರಯಾಣಿಕರಿಂದ ಈ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.


