ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ವಿಷಯ ಪ್ರಸಾರವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಟಾ ಇಂಡಿಯಾ (Meta India) ಅಧಿಕಾರಿಗಳು ಹಾಗೂ ಹಲವು ಸಾಮಾಜಿಕ ಜಾಲತಾಣ ಖಾತೆ ನಿರ್ವಾಹಕರ ವಿರುದ್ಧ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಧಾನಿ ಮೋದಿ ಕುರಿತು ಆಕ್ಷೇಪಾರ್ಹ ವಿಷಯಗಳು ವೈರಲ್ ಆದ ಹಿನ್ನೆಲೆಯಲ್ಲಿ, ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಹೈದರಾಬಾದ್ ಸೈಬರ್ ಕ್ರೈಂ ವಿಭಾಗದ ಡಿಸಿಪಿ ಅರವಿಂದ್ ಬಾಬು ಪ್ರಕರಣ ದಾಖಲಾಗಿರುವುದನ್ನು ದೃಢಪಡಿಸಿದ್ದು, ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ತೆಲಂಗಾಣ ಬಿಜೆಪಿ, ಸಿಜೆಪಿ ನೇತೃತ್ವದಲ್ಲಿ ನಡೆದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆಯ ವೇಳೆ ಪ್ರಧಾನಿ ಮೋದಿ ವಿರುದ್ಧ ಮಾರ್ಪಡಿಸಿದ (Morphed), ನಿಂದನಾತ್ಮಕ ಹಾಗೂ ಅವಹೇಳನಕಾರಿ ವಿಷಯಗಳನ್ನು ಸೃಷ್ಟಿಸಿ, ಪ್ರಸಾರ ಮಾಡಿ ಮತ್ತು ವ್ಯಾಪಕಗೊಳಿಸಿದವರ ವಿರುದ್ಧ ತಕ್ಷಣ ಹಾಗೂ ಮಾದರಿಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಬಿಜೆಪಿ ಮುಖ್ಯ ವಕ್ತಾರ ಹಾಗೂ ಮಾಧ್ಯಮ ಉಸ್ತುವಾರಿ ಎನ್.ವಿ. ಸುಭಾಷ್, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ಅಧಿಕೃತವಾಗಿ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಭಾರತ ಸಂವಿಧಾನದ ವಿಧಿ 19(1)(a) ಪ್ರತಿಯೊಬ್ಬ ನಾಗರಿಕನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದರೂ, ವಿಧಿ 19(2) ಅಡಿಯಲ್ಲಿ ದೇಶದ ಸಾರ್ವಭೌಮತ್ವ, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಮತ್ತು ನೈತಿಕತೆಯ ಹಿತದೃಷ್ಟಿಯಿಂದ ಸಮಂಜಸ ನಿರ್ಬಂಧಗಳನ್ನು ವಿಧಿಸಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳು ರಾಜಕೀಯ ದ್ವೇಷ ಹರಡುವ ವೇದಿಕೆಗಳಾಗಬಾರದು ಹಾಗೂ ಸಂಘಟಿತ ಅವಹೇಳನಕ್ಕೆ ಆಶ್ರಯ ನೀಡಬಾರದು ಎಂದು ಅವರು ಒತ್ತಾಯಿಸಿದರು.
“ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶವಿದೆ. ಆದರೆ ಡಿಜಿಟಲ್ ಮಾಧ್ಯಮದಲ್ಲಿ ವ್ಯಕ್ತಿತ್ವ ಹರಣ ಅಥವಾ ಸಂಘಟಿತ ನಿಂದನೆಗೆ ಅವಕಾಶವಿಲ್ಲ. ಭಾರತದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಬಹುರಾಷ್ಟ್ರೀಯ ಕಂಪನಿಯೂ ದೇಶದ ಕಾನೂನುಗಳಿಂದ ಹೊರತಾಗಿಲ್ಲ,” ಎಂದು ಎನ್.ವಿ. ಸುಭಾಷ್ ಹೇಳಿದರು.
ತೆಲಂಗಾಣ ಬಿಜೆಪಿ ಪೊಲೀಸರ ಮೊರೆ ಹೋಗಿರುವುದು ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಅಥವಾ ಟೀಕೆಯನ್ನು ಮೌನಗೊಳಿಸಲು ಅಲ್ಲ; ಟೀಕೆ ಮತ್ತು ಉದ್ದೇಶಪೂರ್ವಕ ನಿಂದನೆಯ ನಡುವಿನ ಸಂವಿಧಾನಾತ್ಮಕ ಹಾಗೂ ನೈತಿಕ ಗಡಿಯನ್ನು ಸ್ಪಷ್ಟಪಡಿಸುವ ಉದ್ದೇಶದಿಂದ ಎಂದು ಅವರು ಸ್ಪಷ್ಟಪಡಿಸಿದರು.


