ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುಲಭವಾಗಿ ಹಣ ಗಳಿಸುವ ಹೂಡಿಕೆ ಯೋಜನೆಯನ್ನು ಪ್ರಚಾರ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಸಂಪೂರ್ಣ ನಕಲಿ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಫ್ಯಾಕ್ಟ್ ಚೆಕ್ ಘಟಕ ಈ ಕುರಿತು ಸ್ಪಷ್ಟನೆ ನೀಡಿದ್ದು, ವೈರಲ್ ಆಗಿರುವ ವಿಡಿಯೊವನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾಗಿದೆ ಎಂದು ತಿಳಿಸಿದೆ.
ಹಣಕಾಸು ಸಚಿವೆ ಯಾವುದೇ ಹೂಡಿಕೆ ಯೋಜನೆ ಅಥವಾ ಹೂಡಿಕೆ ವೇದಿಕೆಯನ್ನು ಬೆಂಬಲಿಸಿಲ್ಲ ಎಂದು PIB ಸ್ಪಷ್ಟಪಡಿಸಿದೆ. ಸಾರ್ವಜನಿಕರನ್ನು ವಂಚಿಸಲು ವಂಚಕರು AI ಮೂಲಕ ನಕಲಿ ವಿಡಿಯೊಗಳನ್ನು ಸೃಷ್ಟಿಸಿ, ಅಸಾಧಾರಣ ಲಾಭದ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದೆ.
ಹೂಡಿಕೆ ಮಾಡುವ ಮೊದಲು ಅಥವಾ ವೈಯಕ್ತಿಕ ಹಾಗೂ ಹಣಕಾಸು ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಅಧಿಕೃತ ಮೂಲಗಳ ಮೂಲಕ ಮಾಹಿತಿಯನ್ನು ಪರಿಶೀಲಿಸಬೇಕು ಎಂದು PIB ಸಾರ್ವಜನಿಕರಿಗೆ ಮನವಿ ಮಾಡಿದೆ.


