ನವದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (Paytm Payments Bank Limited) ಕಾರ್ಯಾಚರಣೆಯನ್ನು ಅಧಿಕೃತವಾಗಿ ಮುಕ್ತಾಯಗೊಳಿಸುವ (Winding-up) ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಟಿಸಿದೆ. ಈ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮಾಜಿ ಮುಖ್ಯ ಮಹಾಪ್ರಬಂಧಕರಾದ ಗಿರಿಕುಮಾರ್ ನಾಯರ್ ಅವರನ್ನು ಅಧಿಕೃತ ಲಿಕ್ವಿಡೇಟರ್ (Official Liquidator) ಆಗಿ ನೇಮಕ ಮಾಡಲಾಗಿದೆ.
ಆರ್‌ಬಿಐ ಪ್ರಕಟಣೆಯ ಪ್ರಕಾರ, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ–1949 ಹಾಗೂ ಕಂಪನಿಗಳ ಕಾಯ್ದೆ–2013ರ ನಿಬಂಧನೆಗಳ ಅನ್ವಯ ಬ್ಯಾಂಕ್ ವಿಂಡ್-ಅಪ್‌ಗೆ ಅನುಮತಿ ನೀಡಿರುವ ದೆಹಲಿ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ಹಿಂದೆ, ಗಂಭೀರ ನಿಯಂತ್ರಣ ಉಲ್ಲಂಘನೆಗಳು ಹಾಗೂ ಬ್ಯಾಂಕ್‌ನ ಆಡಳಿತ ಮತ್ತು ಕಾರ್ಯನಿರ್ವಹಣೆಯಲ್ಲಿ ಕಂಡುಬಂದ ಅಕ್ರಮಗಳ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಬ್ಯಾಂಕಿಂಗ್ ಪರವಾನಗಿಯನ್ನು ಆರ್‌ಬಿಐ ರದ್ದುಗೊಳಿಸಿತ್ತು.
ಆರ್‌ಬಿಐ ಸ್ಪಷ್ಟಪಡಿಸಿರುವಂತೆ, ಬ್ಯಾಂಕ್‌ನ ವಿಂಡ್-ಅಪ್ ಪ್ರಕ್ರಿಯೆ ಆರಂಭವಾದರೂ, ಠೇವಣಿದಾರರ ಎಲ್ಲಾ ಠೇವಣಿ ಬಾಧ್ಯತೆಗಳನ್ನು (Deposit Liabilities) ಮರುಪಾವತಿಸಲು ಅಗತ್ಯವಿರುವಷ್ಟು ದ್ರವ್ಯ ಲಭ್ಯತೆ (Liquidity) ಬ್ಯಾಂಕ್ ಹೊಂದಿದೆ. ಆದ್ದರಿಂದ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಬ್ಯಾಂಕ್ ಭರವಸೆ ನೀಡಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ವಿಂಡ್-ಅಪ್ ಪ್ರಕ್ರಿಯೆಯನ್ನು ಕಾನೂನುಬದ್ಧವಾಗಿ ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ.


