ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ 16ನೇ ಹಾಕಿ ಇಂಡಿಯಾ ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್ಶಿಪ್–2026ಕ್ಕೆ ಮಂಗಳವಾರ ಚಾಲನೆ ದೊರೆಯಿತು.
ದೇಶದ ಅತ್ಯುತ್ತಮ ಜೂನಿಯರ್ ಪುರುಷರ ಹಾಕಿ ತಂಡಗಳು ಭಾಗವಹಿಸಿರುವ ಈ ಟೂರ್ನಿಯು ಆಗಸ್ಟ್ 8ರವರೆಗೆ 12 ದಿನಗಳ ಕಾಲ ನಡೆಯಲಿದ್ದು, ರಾಷ್ಟ್ರೀಯ ಚಾಂಪಿಯನ್ ತಂಡವನ್ನು ನಿರ್ಧರಿಸಲಿದೆ.
ಟೂರ್ನಿಯ ಮೊದಲ ದಿನ ಡಿವಿಷನ್ ‘ಸಿ’ಯ ಪೂಲ್ ‘ಎ’ ಪಂದ್ಯದಲ್ಲಿ ಅಸ್ಸಾಂ ಮತ್ತು ಮಿಜೋರಾಂ ತಂಡಗಳು ಮುಖಾಮುಖಿಯಾದವು.
ಈ ಬಾರಿ ಡಿವಿಷನ್ ‘ಎ’, ‘ಬಿ’ ಮತ್ತು ‘ಸಿ’ ವಿಭಾಗಗಳಲ್ಲಿ ಒಟ್ಟು 30 ತಂಡಗಳು ಸ್ಪರ್ಧಿಸುತ್ತಿವೆ. ಡಿವಿಷನ್ ‘ಎ’ ತಂಡಗಳು ರಾಷ್ಟ್ರೀಯ ಪ್ರಶಸ್ತಿಗಾಗಿ ಸೆಣಸಿದರೆ, ಡಿವಿಷನ್ ‘ಬಿ’ ಹಾಗೂ ‘ಸಿ’ ತಂಡಗಳು ಮೇಲಿನ ವಿಭಾಗಕ್ಕೆ ಬಡ್ತಿ ಪಡೆಯುವ ಗುರಿಯೊಂದಿಗೆ ಕಣಕ್ಕಿಳಿದಿವೆ. ಬಡ್ತಿ ಹಾಗೂ ಹಿಂಬಡ್ತಿ (Promotion and Relegation) ವ್ಯವಸ್ಥೆ ಜಾರಿಯಲ್ಲಿರುವುದರಿಂದ ಪ್ರತಿಯೊಂದು ಪಂದ್ಯಕ್ಕೂ ವಿಶೇಷ ಮಹತ್ವ ಲಭಿಸಿದೆ.
ಚಾಂಪಿಯನ್ಶಿಪ್ಗೆ ಮುನ್ನ ಮಾತನಾಡಿದ ಹಾಕಿ ಇಂಡಿಯಾ ಅಧ್ಯಕ್ಷ ಡಾ. ದಿಲೀಪ್ ತಿರ್ಕಿ, ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉನ್ನತ ಮಟ್ಟದ ಸ್ಪರ್ಧಾತ್ಮಕ ವೇದಿಕೆ ಒದಗಿಸುವ ಮೂಲಕ ಭಾರತದ ಹಾಕಿ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಈ ಟೂರ್ನಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ಮಾತನಾಡಿ, ದೇಶದ ಉದಯೋನ್ಮುಖ ಹಾಕಿ ಆಟಗಾರರ ಬೆಳವಣಿಗೆಯ ಪಯಣದಲ್ಲಿ ಈ ರಾಷ್ಟ್ರೀಯ ಚಾಂಪಿಯನ್ಶಿಪ್ ಮಹತ್ವದ ಮೆಟ್ಟಿಲಾಗಿದೆ ಎಂದು ಅಭಿಪ್ರಾಯಪಟ್ಟರು.
ಟೂರ್ನಿಯ ಪೂಲ್ ಹಂತದಲ್ಲಿ ಲೀಗ್ ಮಾದರಿಯ ಸ್ಪರ್ಧೆಗಳು ನಡೆಯಲಿವೆ. ಗೆದ್ದ ತಂಡಕ್ಕೆ 3 ಅಂಕ, ಡ್ರಾ ಆದರೆ ತಲಾ 1 ಅಂಕ ಹಾಗೂ ಸೋತ ತಂಡಕ್ಕೆ ಯಾವುದೇ ಅಂಕ ನೀಡುವುದಿಲ್ಲ. ಡಿವಿಷನ್ ‘ಎ’ಯಲ್ಲಿ ಫಲಿತಾಂಶ ಕಡ್ಡಾಯವಾಗಿರುವ ವರ್ಗೀಕರಣ ಪಂದ್ಯಗಳು ಸಮಬಲದಲ್ಲಿ ಅಂತ್ಯಗೊಂಡರೆ, ಅಂತರರಾಷ್ಟ್ರೀಯ ಹಾಕಿ ಫೆಡರೇಶನ್ (FIH) ನಿಯಮಾವಳಿಯಂತೆ ಶೂಟ್ಔಟ್ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ.


