ನವದೆಹಲಿ: ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ಮಾರ್ಗಗಳ ತಡೆ) ತಿದ್ದುಪಡಿ ಮಸೂದೆ ಕುರಿತ ಚರ್ಚೆಗೆ ಅಡ್ಡಿಪಡಿಸುತ್ತಿರುವುದಾಗಿ ಆರೋಪಿಸಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಮತ್ತು ನಿಗದಿತ ಅವಧಿಯೊಳಗೆ ಶಿಕ್ಷೆ ವಿಧಿಸುವ ಉದ್ದೇಶದಿಂದ ಈ ಮಸೂದೆ ರೂಪಿಸಲಾಗಿದೆ ಎಂದು ಹೇಳಿದರು.
ಇಂತಹ ಮಹತ್ವದ ಮಸೂದೆ ಕುರಿತು ಚರ್ಚೆ ನಡೆಯುವುದನ್ನು ತಡೆಯುವುದು ವಿದ್ಯಾರ್ಥಿಗಳು ಹಾಗೂ ದೇಶದ ಜನತೆಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ರಿಜಿಜು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ವಿಷಯದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಪ್ರತಿಪಕ್ಷಗಳು ವಿದ್ಯಾರ್ಥಿಗಳ ಭಾವನೆಗಳಿಗೆ ಗೌರವ ನೀಡಿ ಪ್ರಸ್ತಾವಿತ ಮಸೂದೆ ಕುರಿತು ರಚನಾತ್ಮಕ ಹಾಗೂ ಅರ್ಥಪೂರ್ಣ ಚರ್ಚೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಪ್ರಸ್ತಾವಿತ ತಿದ್ದುಪಡಿ ಮಸೂದೆಯು ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕಠಿಣ ಶಿಕ್ಷೆ, ತ್ವರಿತ ತನಿಖೆ ಮತ್ತು ನಿಗದಿತ ಅವಧಿಯಲ್ಲಿ ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಳಿಸುವಂತಹ ಹಲವು ಪ್ರಮುಖ ನಿಯಮಗಳನ್ನು ಒಳಗೊಂಡಿದೆ.


