ಅಜಯ್ ರಾವ್ ಜೊತೆ ಮತ್ತೆ ಕುನಾಲ್ ಗಂಜಾವಾಲಾ; ‘ಪಾರ್ಟ್ನರ್’ ಚಿತ್ರದ ‘ಅಮೋರಾ’ ಹಾಡಿನ ಮೇಲೆ ನಿರೀಕ್ಷೆ

2 Min Read
2 Min Read

ಬೆಂಗಳೂರು: ಕನ್ನಡ ಸಿನಿರಸಿಕರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿರುವ ‘ತಾಜ್‌ಮಹಲ್’ ಚಿತ್ರದ ‘ಖುಷಿಯಾಗಿದೇ ಏಕೋ ನಿನ್ನಿಂದಲೇ’ ಹಾಡಿನ ಮೂಲಕ ಮೋಡಿ ಮಾಡಿದ್ದ ಖ್ಯಾತ ಗಾಯಕ ಕುನಾಲ್ ಗಂಜಾವಾಲಾ ಇದೀಗ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ವಿಶೇಷವೆಂದರೆ, ಈ ಬಾರಿಯೂ ಅವರು ನಟ ಅಜಯ್ ರಾವ್ ಅಭಿನಯದ ‘ಪಾರ್ಟ್ನರ್’ ಚಿತ್ರಕ್ಕಾಗಿ ಧ್ವನಿ ನೀಡಿದ್ದಾರೆ.

‘ಪಾರ್ಟ್ನರ್’ ಚಿತ್ರದ ಮೊದಲ ಸಿಂಗಲ್ ‘ಅಮೋರಾ’ ಜುಲೈ 27ರಂದು ಬಿಡುಗಡೆಯಾಗಲಿದ್ದು, ಈ ಹಾಡಿನ ಮೂಲಕ ಅಜಯ್ ರಾವ್ ಮತ್ತು ಕುನಾಲ್ ಗಂಜಾವಾಲಾ ಅವರ ಜನಪ್ರಿಯ ಜೋಡಿ ಮತ್ತೆ ಒಂದಾಗಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಕನ್ನಡದಲ್ಲಿ ಕುನಾಲ್ ಅವರ ಹಿಟ್ ಹಾಡುಗಳ ಸರಮಾಲೆ

2000ರ ದಶಕದಲ್ಲಿ ಕುನಾಲ್ ಗಂಜಾವಾಲಾ ಕನ್ನಡ ಚಿತ್ರರಂಗಕ್ಕೆ ಅನೇಕ ಸೂಪರ್‌ಹಿಟ್ ಹಾಡುಗಳನ್ನು ನೀಡಿದ್ದಾರೆ. ‘ಆಕಾಶ್’, ‘ಐಶ್ವರ್ಯ’, ‘ಅರಸು’, ‘ಮುಂಗಾರು ಮಳೆ’, ‘ಚಾರ್ಮಿನಾರ್’, ‘ಅರಾಮನೆ’, ‘ಮಿಲನ’, ‘ಶೌರ್ಯ’ ಮತ್ತು ‘ಚೆಲುವಿನ ಚಿತ್ತಾರ’ ಸೇರಿದಂತೆ ಹಲವು ಚಿತ್ರಗಳ ಹಾಡುಗಳು ಇಂದಿಗೂ ಸಂಗೀತಪ್ರಿಯರ ನೆಚ್ಚಿನ ಪಟ್ಟಿಯಲ್ಲಿವೆ.

ಬಹುಭಾಷೆಗಳಲ್ಲಿ ಗಾಯನ ಮುಂದುವರಿಸಿದ ಕಾರಣ ಕಳೆದ ಕೆಲವು ವರ್ಷಗಳಲ್ಲಿ ಕನ್ನಡದಲ್ಲಿ ಅವರ ಹಾಡುಗಳ ಸಂಖ್ಯೆ ಕಡಿಮೆಯಾಗಿತ್ತು. ಹೀಗಾಗಿ, ಅವರ ಈ ಕಮ್‌ಬ್ಯಾಕ್ ಅಭಿಮಾನಿಗಳಿಗೆ ವಿಶೇಷ ಸಂತಸ ತಂದಿದೆ.

ಪುದುಚೇರಿಯಲ್ಲಿ ಚಿತ್ರೀಕರಣಗೊಂಡ ‘ಅಮೋರಾ’

ನಕುಲ್ ಅಭ್ಯಂಕರ್ ಸಂಗೀತ ಸಂಯೋಜಿಸಿರುವ ‘ಅಮೋರಾ’ ಹಾಡಿಗೆ ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿರುವ ಈ ಹಾಡನ್ನು ಪುದುಚೇರಿ ಹಾಗೂ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಹಾಡಿನಲ್ಲಿ ಅಜಯ್ ರಾವ್ ಹೊಸ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆಧುನಿಕ ಸಂಬಂಧಗಳ ಕಥೆ ಹೇಳುವ ‘ಪಾರ್ಟ್ನರ್’

‘ಧೈರ್ಯಂ’ ಚಿತ್ರದ ಬಳಿಕ ನಿರ್ದೇಶಕ ಶಿವ ತೇಜಸ್ ಮತ್ತು ಅಜಯ್ ರಾವ್ ಮತ್ತೊಮ್ಮೆ ‘ಪಾರ್ಟ್ನರ್’ ಮೂಲಕ ಒಂದಾಗಿದ್ದಾರೆ.

ಚಿತ್ರವು ಆಧುನಿಕ ಸಂಬಂಧಗಳು, ಪ್ರೀತಿ, ಬ್ರೇಕ್‌ಅಪ್, ಲಿವ್-ಇನ್ ಸಂಬಂಧಗಳು ಹಾಗೂ ಜೀವನ ಸಂಗಾತಿಯ ಆಯ್ಕೆಯಲ್ಲಿ ನಂಬಿಕೆ ಮತ್ತು ಬದ್ಧತೆಯ ಮಹತ್ವವನ್ನು ಒತ್ತಿಹೇಳುವ ಕಥಾಹಂದರ ಹೊಂದಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಅಜಯ್ ರಾವ್‌ಗೆ ನಾಯಕಿಯಾಗಿ ಬೃಂದಾ ಆಚಾರ್ಯ ಅಭಿನಯಿಸಿದ್ದು, ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಸದ್ಯ ಚಿತ್ರವು ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ.

Share This Article