ಚೆನ್ನೈ: ನಿರ್ದೇಶಕ ಎಚ್. ವಿನೋತ್ ತಮ್ಮ ಮುಂದಿನ ಚಿತ್ರದ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಈ ಸಿನಿಮಾ ತಮ್ಮ ಸೂಪರ್‌ಹಿಟ್ ‘ಸತುರಂಗ ವೇಟ್ಟೈ’ ಚಿತ್ರದ ಶೈಲಿಯಲ್ಲೇ ಇರಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ‘ಥೀರನ್ ಅಧಿಕಾರಂೊಂದು’ ಮಾದರಿಯ ಮತ್ತೊಂದು ಚಿತ್ರವನ್ನು ಸದ್ಯಕ್ಕೆ ಮಾಡುವ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಇತ್ತೀಚಿನ ಚಿತ್ರ ‘ಜನ ನಾಯಕನ್’ ಬಿಡುಗಡೆ ಹಿನ್ನೆಲೆಯಲ್ಲಿ Cinema Expressಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ನಿರ್ದೇಶಕ ಬ್ರಮ್ಮ ತಮ್ಮ ಕಥೆ ಮತ್ತು ಚಿತ್ರಕಥೆಯ ಆಧಾರದ ಮೇಲೆ ಈ ಹೊಸ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂದು ಹೇಳಿದರು.
ಇತ್ತೀಚೆಗೆ ಈ ಚಿತ್ರಕ್ಕೆ ‘ಕಾನ್ ಬಾಬು’ (Con Babu) ಎಂಬ ಶೀರ್ಷಿಕೆ ನಿಗದಿಯಾಗಿದ್ದು, ನಟ ನಟ್ಟಿ (ನಟರಾಜ್) ನಾಯಕನಾಗಿ ನಟಿಸುತ್ತಿದ್ದಾರೆ ಎಂಬ ವರದಿಗಳು ಹರಿದಾಡಿವೆ. ಸುಮಾರು 12 ವರ್ಷಗಳ ಬಳಿಕ ಎಚ್. ವಿನೋತ್ ಮತ್ತು ನಟ್ಟಿ ಮತ್ತೆ ಒಂದಾಗುತ್ತಿದ್ದಾರೆ ಎನ್ನಲಾಗಿದೆ.
ಈ ಚಿತ್ರದಲ್ಲಿ ಸುಮಾರು 80 ಶೇಕಡಾ ಚಿತ್ರೀಕರಣ ಪೂರ್ಣಗೊಂಡಿದ್ದು, ‘ಸತುರಂಗ ವೇಟ್ಟೈ’ ಅಭಿಮಾನಿಗಳಿಗೆ ಈ ಸಿನಿಮಾ ಖಂಡಿತ ಇಷ್ಟವಾಗಲಿದೆ ಎಂದು ವಿನೋತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, 2017ರಲ್ಲಿ ಕಾರ್ತಿ ನಟಿಸಿದ್ದ ‘ಥೀರನ್ ಅಧಿಕಾರಂೊಂದು’ ಮಾದರಿಯ ಮತ್ತೊಂದು ಸಿನಿಮಾ ಮಾಡುವ ಆಸಕ್ತಿ ನನಗಿಲ್ಲ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ವಿನೋತ್, ಪೊಲೀಸ್ ಮತ್ತು ಅಪರಾಧಿಗಳ ಸುತ್ತ ಸಾಗುವ ಆ ಕಥೆಯಲ್ಲಿ ತಾವು ಹೇಳಬೇಕಿದ್ದ ಎಲ್ಲವನ್ನೂ ಹೇಳಿದ್ದೇನೆ. ಅದೇ ರೀತಿಯ ಲೋಕಕ್ಕೆ ಮತ್ತೆ ಮರಳುವ ಆಸಕ್ತಿ ಇಲ್ಲ ಎಂದು ತಿಳಿಸಿದರು.
ಆದರೆ, ‘ಅಧಿಕಾರಂೊಂದು’ ಎಂಬ ಉಪಶೀರ್ಷಿಕೆ ಬಳಸಿದಾಗಲೇ ಎರಡನೇ ಹಾಗೂ ಮೂರನೇ ಭಾಗ ಮಾಡುವ ಯೋಚನೆ ಇತ್ತು ಎಂದು ಅವರು ಹೇಳಿದರು. ಆದರೆ, ‘ಥೀರನ್’ಗೆ ಸಮನಾದ ಆಳವಾದ ಕಥೆ ಇನ್ನೂ ಸಿಕ್ಕಿಲ್ಲ. ತಾವು ಒಂದು ಫ್ಯಾಂಟಸಿ ಕಥೆಯನ್ನು ಯೋಚಿಸಿದ್ದರೂ, ‘ಥೀರನ್’ ವಾಸ್ತವಿಕತೆಯ ಮೇಲೆ ಆಧಾರಿತ ಚಿತ್ರವಾಗಿದ್ದರಿಂದ ಆ ರೀತಿಯ ಪ್ರಯೋಗವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಪ್ರಶ್ನೆ ಎದುರಾಯಿತು ಎಂದು ವಿನೋತ್ ವಿವರಿಸಿದರು.


