ಭಾರತ–ರೊಮೇನಿಯಾ ಸಂಬಂಧಕ್ಕೆ ಹೊಸ ಬಲ; ವಿಜ್ಞಾನ, ಶಿಕ್ಷಣ, ಕ್ರೀಡೆ ಸೇರಿ ಮೂರು ಮಹತ್ವದ ಒಪ್ಪಂದಗಳಿಗೆ ಸಹಿ

2 Min Read
2 Min Read

ಬುಖಾರೆಸ್ಟ್: ಭಾರತ ಮತ್ತು ರೊಮೇನಿಯಾ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಮತ್ತಷ್ಟು ಬಲ ನೀಡುವ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ ಹಾಗೂ ಕ್ರೀಡೆ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಮೂರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ರೊಮೇನಿಯಾದ ರಾಜಧಾನಿ ಬುಖಾರೆಸ್ಟ್ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ರೊಮೇನಿಯಾ ರಾಷ್ಟ್ರಪತಿ ನಿಕುಶೋರ್ ಡಾನ್ (Nicușor Dan) ಅವರ ನೇತೃತ್ವದಲ್ಲಿ ನಡೆದ ಉಭಯ ದೇಶಗಳ ನಿಯೋಗ ಮಟ್ಟದ ಮಾತುಕತೆ ಬಳಿಕ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಭಾರತ ಮತ್ತು ರೊಮೇನಿಯಾ ನಡುವೆ ಕಳೆದ ಏಳು ದಶಕಗಳಿಂದ ಪರಸ್ಪರ ವಿಶ್ವಾಸ, ಗೌರವ ಹಾಗೂ ಜನರ ನಡುವಿನ ಬಲವಾದ ಬಾಂಧವ್ಯದ ಆಧಾರದ ಮೇಲೆ ಸ್ನೇಹಪೂರ್ಣ ಸಂಬಂಧ ಬೆಳೆದಿದೆ ಎಂದು ಹೇಳಿದರು.

ಉಭಯ ದೇಶಗಳ ಪಾಲುದಾರಿಕೆ ಕಾಲಕ್ರಮೇಣ ಮತ್ತಷ್ಟು ಗಟ್ಟಿಯಾಗುತ್ತಿದ್ದು, ಈಗ ಹೆಚ್ಚಿನ ಗುರಿಗಳು, ಬಲಿಷ್ಠ ಸಹಕಾರ ಮತ್ತು ಭವಿಷ್ಯದ ಹಂಚಿಕೆಯ ದೃಷ್ಟಿಕೋನದೊಂದಿಗೆ ಹೊಸ ಹಂತಕ್ಕೆ ಪ್ರವೇಶಿಸುತ್ತಿದೆ ಎಂದು ಅವರು ತಿಳಿಸಿದರು.

ರೊಮೇನಿಯಾ ರಾಷ್ಟ್ರಪತಿ ನಿಕುಶೋರ್ ಡಾನ್ ಅವರೊಂದಿಗೆ ನಡೆದ ಮಾತುಕತೆ ಫಲಪ್ರದವಾಗಿದ್ದು, ಕಳೆದ ಕೆಲವು ವರ್ಷಗಳ ಪ್ರಗತಿಯನ್ನು ಪರಿಶೀಲಿಸಲಾಗಿದೆ. ಉಭಯ ದೇಶಗಳ ಆದ್ಯತೆಗಳಿಗೆ ಅನುಗುಣವಾಗಿ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ವಿಸ್ತರಿಸಲು ಒಪ್ಪಿಗೆ ವ್ಯಕ್ತವಾಗಿದೆ ಎಂದು ಮುರ್ಮು ಹೇಳಿದರು.

ಮುಂದಿನ ಮೂರು ವರ್ಷಗಳಲ್ಲಿ ಭಾರತ–ರೊಮೇನಿಯಾ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ ಅವರು, ಭಾರತ–ಯುರೋಪಿಯನ್ ಒಕ್ಕೂಟ (India-EU) ಮುಕ್ತ ವ್ಯಾಪಾರ ಒಪ್ಪಂದ ಜಾರಿಯಾದರೆ ಕೈಗಾರಿಕೆಗಳು ಹಾಗೂ ಪರಿಣತಿ ಹೊಂದಿದ ವೃತ್ತಿಪರರಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದರು.

ಉತ್ಪಾದನಾ ವಲಯ, ಔಷಧೋದ್ಯಮ, ಆರೋಗ್ಯ ಸೇವೆ, ನವೀಕರಿಸಬಹುದಾದ ಇಂಧನ, ಹಸಿರು ಹೈಡ್ರೋಜನ್, ಕೃಷಿ ಉತ್ಪಾದನೆ, ರಸಗೊಬ್ಬರ, ವಿಜ್ಞಾನ ಮತ್ತು ತಂತ್ರಜ್ಞಾನ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಹಾಗೂ ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಅವರು ಹೇಳಿದರು.

ಇದೇ ವೇಳೆ, ರೊಮೇನಿಯಾ ಪ್ರವಾಸ ಮುಂದುವರಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ರೊಮೇನಿಯಾ ಪ್ರಧಾನಿ ಇಲಿಯೆ ಬೊಲೋಜಾನ್ ಅವರೊಂದಿಗೆ ವಿಕ್ಟೋರಿಯಾ ಪ್ಯಾಲೆಸ್ನಲ್ಲಿ ಮಾತುಕತೆ ನಡೆಸಲಿದ್ದಾರೆ. ಜೊತೆಗೆ, ರಾಷ್ಟ್ರಪತಿ ನಿಕುಶೋರ್ ಡಾನ್ ಅವರೊಂದಿಗೆ ಭಾರತ–ರೊಮೇನಿಯಾ ಉದ್ಯಮ ವೇದಿಕೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ನಂತರ ಅವರು ರೊಮೇನಿಯಾ ಸಂಸತ್ಗೆ ಭೇಟಿ ನೀಡಿ, ಸೆನೆಟ್ ಅಧ್ಯಕ್ಷ ಮಿರ್ಚಿಯಾ ಅಬ್ರುಡಿಯಾನ್ ಹಾಗೂ ಪ್ರತಿನಿಧಿಗಳ ಸದನದ ಅಧ್ಯಕ್ಷ ಸೋರಿನ್ ಗ್ರಿಂಡಿಯಾನು ಅವರನ್ನು ಭೇಟಿಯಾಗಲಿದ್ದಾರೆ. ಅಲ್ಲದೆ, ಅಜ್ಞಾತ ಸೈನಿಕನ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಲಿದ್ದಾರೆ.

ಪ್ರವಾಸದ ಭಾಗವಾಗಿ ಬುಖಾರೆಸ್ಟ್ ಯುನಿವರ್ಸಿಟಿ ಆಫ್ ಎಕನಾಮಿಕ್ ಸ್ಟಡೀಸ್ ಹಾಗೂ ನ್ಯಾಷನಲ್ ವಿಲೇಜ್ ಮ್ಯೂಸಿಯಂಗೂ ಭೇಟಿ ನೀಡಲಿದ್ದು, ಶಿಕ್ಷಣ, ಸಂಸ್ಕೃತಿ ಹಾಗೂ ಜನರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಭಾರತದ ಬದ್ಧತೆಯನ್ನು ಇದು ಪ್ರತಿಬಿಂಬಿಸಲಿದೆ.

Share This Article