ಪ್ರಶ್ನೆಪತ್ರಿಕೆ ಸೋರಿಕೆಗೆ ಕಡಿವಾಣ: ಹೊಸ ಕಾನೂನು ತರಲು ಪ್ರಧಾನಿ ಮೋದಿ ಘೋಷಣೆ

1 Min Read
1 Min Read

ನವದೆಹಲಿ: ದೇಶದಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಹೊಸ ಕಾನೂನು ತರಲಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಹಾಗೂ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ವ್ಯವಸ್ಥೆಯನ್ನು ಒಳಗೊಂಡ ಮಸೂದೆಯನ್ನು ಶೀಘ್ರದಲ್ಲೇ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಶುಕ್ರವಾರ ರಾತ್ರಿ ದೇಶವನ್ನುದ್ದೇಶಿಸಿ ವಿಡಿಯೊ ಸಂದೇಶ ನೀಡಿದ ಪ್ರಧಾನಿ ಮೋದಿ, ಪ್ರಶ್ನೆಪತ್ರಿಕೆ ಸೋರಿಕೆ ಘಟನೆ ನಡೆದ ನಂತರ ಕಳೆದ ಎರಡೂವರೆ ತಿಂಗಳಲ್ಲಿ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರು ಜೈಲಿನಲ್ಲಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿಗಳು ಒಂದು ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಸಾಧ್ಯವಾದಷ್ಟು ಬೇಗ ಪರೀಕ್ಷೆಗಳನ್ನು ನಡೆಸುವುದು ಅತ್ಯಗತ್ಯವಾಗಿತ್ತು ಎಂದು ಪ್ರಧಾನಿ ತಿಳಿಸಿದರು.

ಪ್ರಶ್ನೆಪತ್ರಿಕೆ ಸೋರಿಕೆ ಸಣ್ಣ ವಿಷಯವಲ್ಲ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ತೀವ್ರ ಮಾನಸಿಕ ನೋವು ಅನುಭವಿಸಿದ್ದಾರೆ ಎಂದು ಅವರು ಹೇಳಿದರು.

ನಿನ್ನೆ ಸಂಬಂಧಿತ ಇಲಾಖೆಗಳಿಗೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ಸ್ಥಾಪನೆ ಸೇರಿದಂತೆ ಅಗತ್ಯ ಕಾನೂನು ತಿದ್ದುಪಡಿ ಕುರಿತು ಪ್ರಸ್ತಾವನೆ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದೆ. ಇಲಾಖೆಗಳು ನಿರಂತರವಾಗಿ ಕೆಲಸ ಮಾಡಿ, ಮಸೂದೆ ಕರಡನ್ನು ಶುಕ್ರವಾರ ತಡರಾತ್ರಿ ಸಲ್ಲಿಸಿವೆ ಎಂದು ಮೋದಿ ತಿಳಿಸಿದರು.

ಈ ಕರಡಿನಲ್ಲಿ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ಸ್ಥಾಪನೆ, ಕಠಿಣ ಶಿಕ್ಷೆಯ ವಿಧಿಗಳು ಸೇರಿದಂತೆ ಹಲವು ಮಹತ್ವದ ಅಂಶಗಳನ್ನು ಸೇರಿಸಲಾಗಿದೆ. ಶನಿವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆಯ ಕುರಿತು ಚರ್ಚೆ ನಡೆಯಲಿದ್ದು, ಸಚಿವರ ಸಲಹೆಗಳನ್ನು ಒಳಗೊಂಡ ಬಳಿಕ ಅಂತಿಮ ರೂಪ ನೀಡಲಾಗುತ್ತದೆ ಎಂದು ಹೇಳಿದರು.

ಸಂಸತ್ತಿನ ಅಧಿವೇಶನದ ಎರಡನೇ ವಾರ ಸೋಮವಾರದಿಂದ ಆರಂಭವಾಗಲಿದ್ದು, ಈ ಮಸೂದೆಯನ್ನು ಸಾಧ್ಯವಾದಷ್ಟು ಬೇಗ ಉಭಯ ಸದನಗಳಲ್ಲಿ ಅಂಗೀಕರಿಸಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

Share This Article